ಮೇಕೆದಾಟು ಯೋಜನೆ ಅನುಷ್ಠಾನದ ಕುರಿತು ರಾಜ್ಯ ಸರ್ಕಾರದ ದೃಢ ಸಂಕಲ್ಪವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪುನರುಚ್ಚರಿಸಿದ್ದಾರೆ. ಇದೇ ವೇಳೆ ತಾವು ಮುಂದಿನ ಸಿಎಂ ಆಗುವ ಕುರಿತಾದ ಪ್ರಶ್ನೆಗೂ ಡಿ ಕೆ ಶಿವಕುಮಾರ್ ಅವರು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸರ್ಕಾರದ ಇನ್ನುಳಿದ ಎರಡು ವರ್ಷಗಳ ಅವಧಿಗೆ ಮತ್ತಷ್ಟು ಹೆಚ್ಚಿನ ಜನಪರ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದರು. ಕಳೆದ ಎರಡು ವರ್ಷ ಸಮರ್ಪಕವಾಗಿ ಮಳೆಯಾಗಿದ್ದರೂ, ಈ ಬಾರಿ ಇನ್ನೂ ಸರಿಯಾಗಿ ಮಳೆಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯಕ್ಕೆ ಸಿಗಬೇಕಾದ 177 ಟಿ.ಎಂ.ಸಿ ನೀರನ್ನು ಜಾರಿಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು. ಇನ್ನು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡಿಗೆ ಯಾವುದೇ ರೀತಿಯ ಹಕ್ಕಿಲ್ಲ, ಸಿಡಬ್ಲ್ಯುಸಿ ನಿಯಮಗಳ ಪ್ರಕಾರವೇ ಯೋಜನೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ ಅವರು, ಈಗಾಗಲೇ ರಾಜ್ಯ ಸರ್ಕಾರ ಯೋಜನೆಯ ಭೂಮಿಯನ್ನು ಗುರುತಿಸಿದ್ದು, ಹೊಸ ಡಿ.ಪಿ.ಆರ್ ಸಿದ್ಧಪಡಿಸುತ್ತಿದೆ, ಕೇಂದ್ರ ಸರ್ಕಾರದ ಅನುಮತಿ ಸಿಗುತ್ತಿದ್ದಂತೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಘೋಷಿಸಿದರು. ಇದೇ ವೇಳೆ, ತಾವು ಮುಂದಿನ ಮುಖ್ಯಮಂತ್ರಿಯಾಗುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, “ಅದಕ್ಕೆಲ್ಲ ಕಾಲ, ಟೈಮು, ಮುಹೂರ್ತ ಕೂಡಿ ಬರಬೇಕು” ಎಂದು ಮಾರ್ಮಿಕವಾಗಿ ಹೇಳುತ್ತಲೇ ಮುನ್ನಡೆದರು.

