• ಮಂಗಸುಳಿಯ ಭಂಡಾರೆ ಕುಟುಂಬದ ವಿವಾದ ಇತ್ಯರ್ಥ!
• ಮಹಿಳಾ ಆಯೋಗಕ್ಕೆ ಸಲ್ಲಿಕೆಯಾಗಿದ್ದ ಗಂಭೀರ ದೂರು!
• ಚರಂಡಿ ನೀರು ಬಿಡುವ ವಿಚಾರಕ್ಕೆ ಜಗಳ!
• ಹೊಸ ಚರಂಡಿ ನಿರ್ಮಾಣದ ಭರವಸೆಯೊಂದಿಗೆ ಸುಖಾಂತ್ಯ!

ಕಾಗವಾಡ ತಾಲೂಕಿನ ಮಂಗಸುಳಿ ಗ್ರಾಮದ ಭಂಡಾರೆ ಕುಟುಂಬದಲ್ಲಿ ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಯೊಂದು ಮಹಿಳಾ ಆಯೋಗದ ಮೆಟ್ಟಿಲೇರಿತ್ತು. ಪ್ರಸ್ತುತ ಗ್ರಾಮದ ಮುಖಂಡರು ಮತ್ತು ಅಧಿಕಾರಿಗಳು ಒಟ್ಟಾಗಿ ಭಂಡಾರೆ ಕುಟುಂಬದ ಸದಸ್ಯರನ್ನು ಸೇರಿಸಿ ಸಂಧಾನ ಮಾಡುವ ಮೂಲಕ ನೆನೆಗುದಿಗೆ ಬಿದ್ದಿದ್ದ ಈ ಸಮಸ್ಯೆಯನ್ನು ಇತ್ಯರ್ಥ ಪಡಿಸಿದ್ದಾರೆ.
ಮಂಗಳವಾರ ದಿನಾಂಕ 19 ರಂದು ಕಾಗವಾಡ ತಾಲೂಕಿನ ಮಂಗಸುಳಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸಂಜಯ್ ಸೂರ್ಯವಂಶಿ ಮತ್ತು ಮಂಗಸುಳಿ ಗ್ರಾಮದ ಹಿರಿಯರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಪೂಜಾರಿ ಇವರ ಮಧ್ಯಸ್ಥಿಕೆಯಲ್ಲಿ ಸಭೆ ನಡೆಸಲಾಯಿತು. ವಾರ್ಡ್ ನಂಬರ್ 6 ರಲ್ಲಿರುವ ಭಂಡಾರೆ ಕುಟುಂಬದಲ್ಲಿದ್ದ ಒಳಚರಂಡಿ ರಸ್ತೆ ಕುರಿತಾದ ಒಂದು ವರ್ಷದ ಹಳೆಯ ಸಮಸ್ಯೆಯನ್ನು ಚರ್ಚೆಯ ಮುಖಾಂತರ ಬಗೆಹರಿಸಿ ಸುಖಾಂತ್ಯ ಹಾಡಿದ್ದಾರೆ.
ಮಾದೇವ ಭಂಡಾರೆ, ದೀಪಕ್ ಭಂಡಾರೆ ಹಾಗೂ ರೋಹಿಣಿ ಭಂಡಾರೆ ಇವರ ಮಧ್ಯದಲ್ಲಿ ಚರಂಡಿ ನಿಮಿತ್ತವಾಗಿ ಕಳೆದ ಒಂದು ವರ್ಷದಿಂದ ವಾದ-ವಿವಾದವಿತ್ತು. ಅದರಲ್ಲಿ ಚರಂಡಿ ನೀರನ್ನು ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಬಿಡುವ ಕುರಿತು ವಿವಾದ ಏರ್ಪಟ್ಟಿತ್ತು. ಇದು ವಿಕೋಪಕ್ಕೆ ಹೋಗಿ ರೋಹಿಣಿ ಭಂಡಾರೆ ಇವರು ನ್ಯಾಯಕ್ಕಾಗಿ ಮಹಿಳಾ ಆಯೋಗಕ್ಕೆ ಹೋಗಿ ದೂರು ನೀಡಿದ್ದರಿಂದ ಪ್ರಕರಣದ ತೀವ್ರತೆ ಹೆಚ್ಚಾಗಿತ್ತು. ಇದೀಗ ಗ್ರಾಮ ಆಡಳಿತಾಧಿಕಾರಿ ಮತ್ತು ರವೀಂದ್ರ ಪೂಜಾರಿಯವರ ಮಧ್ಯಸ್ಥಿಕೆಯಲ್ಲಿ, ಎರಡು ಕುಟುಂಬಗಳಿಗೆ ಪಂಚಾಯಿತಿ ವತಿಯಿಂದ ಹೊಸ ಚರಂಡಿ ನಿರ್ಮಾಣ ಮಾಡಿಕೊಡುವ ವಾಗ್ದಾನದೊಂದಿಗೆ ಸಮಸ್ಯೆ ಸುಖಾಂತ್ಯ ಕಂಡಿತು.
ಈ ಮೊದಲು ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ (ಈಗಿನ ಮಂಗಸುಳಿ ಪಂಚಾಯಿತಿ ಆಡಳಿತಾಧಿಕಾರಿ) ವೀರಣ್ಣ ವಾಲಿ ಹಾಗೂ ಪಿಡಿಒ ಸಂಜಯ್ ಸೂರ್ಯವಂಶಿ ಅವರು ಭಂಡಾರೆ ಕುಟುಂಬದವರನ್ನು ಭೇಟಿಯಾಗಿ ಪರಿಶೀಲನೆ ನಡೆಸಿ ಚರ್ಚಿಸಿದ್ದರಾದರೂ ಪ್ರಕರಣ ಅಂತ್ಯಗೊಂಡಿರಲಿಲ್ಲ.
ಪಂಚಾಯಿತಿಯಲ್ಲಿ ಜರುಗಿದ ಚರ್ಚೆಯಲ್ಲಿ ಬಜರಂಗ ಕಾಂಬಳೆ, ಮಾದೇವ ಭಂಡಾರೆ, ರೋಹಿಣಿ ಭಂಡಾರೆ, ಗಜಾನನ ಭಂಡಾರೆ, ದೀಪಕ್ ಭಂಡಾರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

