ಅಥಣಿ: ತಾಲೂಕಿನ ಸಂಬರಗಿ ಗ್ರಾಮದಲ್ಲಿ ಬುಧವಾರ ಸಾಯಂಕಾಲ ಸುರಿದ ಭಾರೀ ಗಾಳಿ ಮಳೆಗೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಾಳಿಯ ಅಬ್ಬರಕ್ಕೆ 20ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿ, ಹಲವು ಕುಟುಂಬಗಳು ಬೀದಿಪಾಲಾಗಿವೆ.


ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಹಾಗೂ ಬಿರುಗಾಳಿಯಿಂದ ಗ್ರಾಮದ ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಸಮವಾಗಿವೆ. ಗಾಳಿಯ ರಭಸಕ್ಕೆ ತಗಡಿನ ಶೆಡ್ಗಳು ಸುಮಾರು 200 ಅಡಿ ದೂರಕ್ಕೆ ಹಾರಿ ಬಿದ್ದಿದ್ದು, ಪ್ರಮುಖ ಹೆದ್ದಾರಿಗಳ ಮೇಲೆಯೂ ಮನೆಗಳ ಮೇಲ್ಚಾವಣಿಗಳು ಉರುಳಿ ಬಿದ್ದ ದೃಶ್ಯ ಕಂಡುಬಂದಿದೆ.


ಮನೆಗಳಲ್ಲಿದ್ದ ದಿನಸಿ ಸಾಮಗ್ರಿ, ದವಸ ಧಾನ್ಯಗಳು ಸಂಪೂರ್ಣ ನೆನೆದು ಹಾನಿಯಾಗಿದ್ದು, ಒಂದೇ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಏಕಾಏಕಿ ಬಂದ ಗಾಳಿ ಮಳೆಯಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ, ಸರ್ಕಾರ ಕೂಡಲೇ ಸಂತ್ರಸ್ತರಿಗೆ ಪರಿಹಾರ ಒದಗಿಸಿ ಕೊಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

