• ಅನ್ಯಾಯವಾದರೆ ಮೆಟ್ಟಿನಿಂದ ಹೊಡೆಯುವೆ: ಸವದಿ
• ರೈತರ ಸ್ವಾಭಿಮಾನ ಕೆಣಕಿದರೆ ಸುಮ್ಮನಿರಲ್ಲ
• ಕಬ್ಬಿನ ತೂಕದಲ್ಲಿ ಮೋಸ ಮಾಡುವವರಿಗೆ ವಾರ್ನಿಂಗ್
• ಕ್ಷೇತ್ರದ ಜನರೇ ನನಗೆ ಶ್ರೀರಕ್ಷೆ ಎಂದ ಸವದಿ

ಅಥಣಿ ಶಾಸಕ ಲಕ್ಷ್ಮಣ್ ಸವದಿ ಇಂದು ತಮ್ಮ ವಿರೋಧಿಗಳ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. “ಲಕ್ಷ್ಮಣ್ ಸವದಿಯನ್ನ ಟ್ರ್ಯಾಕ್ಟರ್ ಹೊಡೆಯಲು ಕಳಿಸುತ್ತೇವೆ” ಎಂದವರಿಗೆ ಹಳ್ಳಿಯ ಶೈಲಿಯಲ್ಲೇ ತಿರುಗೇಟು ನೀಡಿದ್ದಾರೆ. ರೈತರಿಗೆ ಮೋಸ ಮಾಡುವವರ ವಿರುದ್ಧ ಸಿಡಿದೆದ್ದಿರುವ ಸವದಿ, ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ. ಪ್ರಸಂಗ ಬಂದರೆ ಅನ್ಯಾಯ ಮಾಡಲು ಬಂದವನಿಗೆ ಮೆಟ್ಟಿನಿಂದಲೂ ಹೊಡೆಯುತ್ತೇನೆ ಎಂದು ಗುಡುಗಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೇಲಸಂಗ ಗ್ರಾಮದಲ್ಲಿ ಶನಿವಾರ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೇಲಸಂಗ ಗ್ರಾಮದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ, ತಮ್ಮ ವಿರುದ್ಧದ ವೈಯಕ್ತಿಕ ಟೀಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ನಾನೊಬ್ಬ ರೈತನ ಮಗ, ಎತ್ತು ಹೊಡೆಯುತ್ತೇನೆ, ಟ್ರ್ಯಾಕ್ಟರ್ ಕೂಡ ಹೊಡೆಯುತ್ತೇನೆ. ಆದರೆ, ನನ್ನ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆ ತಂದಲ್ಲಿ ಅಥವಾ ಅನ್ಯಾಯ ಮಾಡಲು ಮುಂದಾದಲ್ಲಿ ಮೆಟ್ಟಿನಿಂದ ಹೊಡೆಯಲು ಹಿಂದೆ ಮುಂದೆ ನೋಡುವುದಿಲ್ಲ” ಎಂದು ಪರೋಕ್ಷವಾಗಿ ಎದುರಾಳಿಗಳಿಗೆ ಎಚ್ಚರಿಕೆ ನೀಡಿದರು. ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದಿ, ಕಬಡ್ಡಿ ಆಡುತ್ತಾ ಬೆಳೆದ ತನಗೆ ಕ್ಷೇತ್ರದ 1,31,000 ಮತದಾರರೇ ರಕ್ಷಾಕವಚ ಎಂದು ಅವರು ಭಾವುಕರಾಗಿ ನುಡಿದರು.
ಇದೇ ವೇಳೆ ಕಬ್ಬು ಬೆಳೆಗಾರರ ಪರವಾಗಿ ಬ್ಯಾಟ್ ಬೀಸಿದ ಸವದಿ, ರೈತರು ಬೆವರು ಹರಿಸಿ ಬೆಳೆದ ಕಬ್ಬಿನ ತೂಕದಲ್ಲಿ ಮೋಸ ಮಾಡುತ್ತಿರುವ ಕಾರ್ಖಾನೆ ಮಾಲೀಕರು ಹಾಗೂ ದಲ್ಲಾಳಿಗಳ ವಿರುದ್ಧ ಕಿಡಿಕಾರಿದರು. “ಒಂದು ಟ್ರಿಪ್ಗೆ ಎರಡು-ಮೂರು ಟನ್ ಕಬ್ಬು ಕದ್ದು ರೈತರ ರಕ್ತ ಹೀರುತ್ತಿರುವವರ ಮೋಸದಾಟ ಇನ್ನು ಮುಂದೆ ನಡೆಯದು” ಎಂದು ವಾರ್ನಿಂಗ್ ನೀಡಿದರು. ಅಮ್ಮಾಜೇಶ್ವರಿ-ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಂಡ ಬಳಿಕ ಅಥಣಿ ತಾಲೂಕು ವಾರ್ಷಿಕ 1 ಕೋಟಿ ಟನ್ ಕಬ್ಬು ಬೆಳೆಯುವ ಮೂಲಕ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
