Athani

“ಹೊಟ್ಟೆಪಾಡಿಗಾಗಿ ತ್ಯಾಜ್ಯ ಸಂಗ್ರಹ… ಅರಿವಿಲ್ಲದೆಯೇ ಪರಿಸರದ ಮೌನ ಕಾವಲುಗಾರರು”

Share

ಬೆಳಗಿನ ಜಾವದಿಂದಲೇ ಬಗಲಿಗೆ ಚೀಲ ಕಟ್ಟಿಕೊಂಡು, ಬೀದಿ-ಬೀದಿಗಳಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಬಾಟಲಿ, ಕಬ್ಬಿಣ, ಪೇಪರ್ ಹಾಗೂ ಇತರ ಮರುಬಳಕೆಯ ತ್ಯಾಜ್ಯವನ್ನು ಸಂಗ್ರಹಿಸಿ ಜೀವನ ಸಾಗಿಸುವ ಶ್ರಮಜೀವಿಗಳು, ತಮ್ಮ ಅರಿವಿಲ್ಲದೆಯೇ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಇವರು ಸಂಗ್ರಹಿಸುವ ಪ್ರತಿಯೊಂದು ತ್ಯಾಜ್ಯವೂ ಮರುಬಳಕೆಗೆ ಹೋಗುವುದರಿಂದ ಪರಿಸರ ಮಾಲಿನ್ಯ ತಗ್ಗುತ್ತಿದ್ದು, ನದಿ, ಕೆರೆ, ಕಾಲುವೆ ಹಾಗೂ ಭೂಮಿಗೆ ಆಗುವ ಹಾನಿ ಕಡಿಮೆಯಾಗುತ್ತಿದೆ.

ಆದರೆ ದಿನವಿಡೀ ಶ್ರಮಪಟ್ಟರೂ ಇವರಿಗೆ ಸಿಗುವ ಆದಾಯ ಅತ್ಯಂತ ಕಡಿಮೆ. ಸಾಮಾಜಿಕ ಭದ್ರತೆ, ಆರೋಗ್ಯ ಸೌಲಭ್ಯ, ಗುರುತಿನ ಚೀಟಿ, ವಿಮೆ ಹಾಗೂ ಜೀವನೋಪಾಯಕ್ಕೆ ಅಗತ್ಯವಾದ ಸರ್ಕಾರಿ ಸೌಲಭ್ಯಗಳು ಇನ್ನೂ ಅನೇಕ ಮಂದಿಗೆ ತಲುಪಿಲ್ಲ. ವೃದ್ಧಾಪ್ಯದಲ್ಲಿ ಆಸರೆಯಾಗುವ ಕನಿಷ್ಠ ಪಿಂಚಣಿ ಯೋಜನೆ, ವಸತಿಗಾಗಿ ಮನೆ ನಿರ್ಮಾಣ ಯೋಜನೆ, ಮನೆ ಕಟ್ಟಲು ಜಾಗವಿಲ್ಲದವರಿಗೆ ನಿವೇಶನ, ಶುದ್ಧ ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವತ್ತ ಸರ್ಕಾರ ವಿಶೇಷ ಗಮನ ಹರಿಸಬೇಕಿದೆ.

ಪರಿಸರವನ್ನು ಸ್ವಚ್ಛವಾಗಿಡುವ ಈ ಮೌನ ಕಾವಲುಗಾರರು ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಶ್ರಮಕ್ಕೆ ಗೌರವ ನೀಡಿ, ಬದುಕಿಗೆ ಭದ್ರತೆ ಕಲ್ಪಿಸುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿಯಾಗಿದೆ. ಇವರಿಗೆ ಸಾಮಾಜಿಕ ಭದ್ರತೆ ಮತ್ತು ಅಗತ್ಯ ಸೌಲಭ್ಯಗಳು ದೊರೆತರೆ, ಪರಿಸರ ಸಂರಕ್ಷಣೆಯ ಈ ಮೌನ ಹೋರಾಟ ಇನ್ನಷ್ಟು ಬಲಗೊಳ್ಳಲಿದೆ.

Tags:

error: Content is protected !!