ಅಬಕಾರಿ ಇಲಾಖೆಯ ಅಧಿಕಾರಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ದಲಿತಪರ ಸಂಘಟನೆಗಳು ಕಾರ್ಯಕರ್ತರು ಚಿಕ್ಕೋಡಿ ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.


ಚಿಕ್ಕೋಡಿ ಕಿವಡ್ ಮೈದಾನದಲ್ಲಿ ಜಮಾಯಿಸಿದ ದಲಿತಪರ ಸಂಘಟನೆಗಳ ಕಾರ್ಯಕರ್ತರು, ಬಸವೇಶ್ವರ ಸರ್ಕಲ್ ಮೂಲಕ ಅಂಬೇಡ್ಕರ ಉದ್ಯಾನವನಕ್ಕೆ ತೆರಳಿ ಅಂಬೇಡ್ಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಳಿಕ ಮಿನಿವಿಧಾನ ಸೌಧಕ್ಕೆ ತೆರಳಿ ತಹಸೀಲ್ದಾರ ಹಾಗೂ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿ, ಅಬಕಾರಿ ಇಲಾಖೆಯ ಅಧಿಕಾರಿಗಳ ದಲಿತ ವಿರೋಧಿ ಧೋರಣೆ ಖಂಡಿಸಿದರು.
ಹುಕ್ಕೇರಿ ತಾಲೂಕಿನ ರಕ್ಷಿ ಗ್ರಾಮದಲ್ಲಿ ಅನೇಕ ವರ್ಷದ ಹಿಂದೆ ದಲಿತ ಸಮುದಾಯದ ಉದ್ಯಮಿದಾರ ಸುರೇಶ ತಳವಾರ ಅವರು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಸುಮಾರು 3 ಕೋಟಿ ರೂ. ಸಾಲ ಪಡೆದು ಜಿಟಿ ಬಾರ್ ಮತ್ತು ರೆಸ್ಟೋರೆಂಟ್ ಆರಂಭಿಸಿದ್ದಾರೆ. ಇದರಿಂದ ನಿಗದಿಪಡಿಸಿದಂತೆ ಸರ್ಕಾರಕ್ಕೆ ಸಾಕಷ್ಟು ಆದಾಯ ಬರುತ್ತಿದೆ. ಆದರೆ, ಉದ್ದೇಶಪೂರ್ವಕವಾಗಿಯೇ ಈ ಬಾರ್ ಸುತ್ತಮುತ್ತಲಿನ ಕಡಿಮೆ ಅಂತರದ ಪ್ರದೇಶಗಳಲ್ಲಿ ಎಂಎಸ್ಐಎಲ್ ಮಳಿಗೆಗಳನ್ನು ಆರಂಭಿಸಿ ತಮ್ಮ ಸಮಾಜದ ಉದ್ಯಮಿ ತಳವಾರ ಅವರನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಹುನ್ನಾರ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಜಿಟಿ ಬಾರ್ ಮತ್ತು ರೆಸ್ಟೋರೆಂಟ್ ಸುತ್ತಲಿನ ಸುಮಾರು ಮೂರ್ನಾಲ್ಕು ಕಿಲೋಮಿಟರ್ ವ್ಯಾಪ್ತಿಯ ಸುಲ್ತಾನಪೂರ, ಅವರಗೋಳ ಹಾಗೂ ಸಾರಾಪುರ ಕ್ರಾಸ್ನಲ್ಲಿ ಎಂಎಸ್ಐಎಲ್ ಮಳಿಗೆ ಆರಂಭಿಸಲಾಗಿದೆ. ಎಸ್ಟಿ ವರ್ಗಕ್ಕೆ ಮಂಜೂರಾದ ಅಕ್ಕಿವಾಟ ಗ್ರಾಮದ ಎಂಎಸ್ಐಎಲ್ ಮಳಿಗೆಯನ್ನು ಸಾಮಾನ್ಯ ವರ್ಗಕ್ಕೆ ವರ್ಗಾಯಿಸಿ ಸಾರಾಪುರ ಕ್ರಾಸ್ಗೆ ಸ್ಥಳಾಂತರಿಸಲಾಗಿದೆ. ಈ ಮಳಿಗೆ ಆರಂಭಕ್ಕೆ ಸ್ಥಳೀಯ ಶಾಸಕ ನಿಖಿಲ್ ಕತ್ತಿ ಹಾಗೂ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಎಂಎಸ್ಐಎಲ್ ಮಳಿಗೆ ಆರಂಭಿಸುವ ವಿಚಾರದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಹಣದ ಆಮಿಷಕ್ಕೆ ಒಳಗಾಗಿದ್ದಾರೆ.ಜೊತೆಗೆ ರಾಜಕೀಯ ಒತ್ತಡಕ್ಕೆ ಮಣಿದು ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಇದರೊಂದಿಗೆ ಪರಿಶಿಷ್ಟ ಜಾತಿಗೆ ಸೇರಿರುವ ತಮ್ಮ ಸಮಾಜದ ಉದ್ಯಮಿ ತಳವಾರ ಅವರನ್ನು ಆರ್ಥಿಕವಾಗಿ ಹತ್ತಿಕ್ಕುವ ಹುನ್ನಾರ ನಡೆಸಿದ್ದಾರೆ ಎಂದು ಆಪಾದಿಸಿದ ಪ್ರತಿಭಟನಾಕಾರರು, ಕೂಡಲೇ ಸಂಬಂಧಿಸಿದ ಅಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಕೇಸ್ ದಾಖಲಿಸಬೇಕು. ಎಂಎಸ್ಐಎಲ್ ಮಳಿಗೆಗಳ ಅನುಮತಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ತಮ್ಮ ಸಮುದಾಯದ ಉದ್ಯಮಿದಾರರಿಗೆ ಆಗುತ್ತಿರುವ ಅನ್ಯಾಯವನ್ನು ತಕ್ಷಣವೇ ಸರಿಪಡಿಸಬೇಕು. ಒಂದು ವೇಳೆ ವಿಳಂಬವಾದಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ದಲಿತ ಸಮಾಜದ ಸಾಮಾಜಿಕ ಮತ್ತು ಆರ್ಥಿಕ ಸದೃಢತೆಗೆ ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನಾ ಮೆರವಣಿಗೆಯಿಂದ ಪಟ್ಟಣದಲ್ಲಿ ಕೆಲಕಾಲ ವಾಹನ ಮತ್ತು ಜನಸಂಚಾರಕ್ಕೆ ಅಡಚಣೆಯಾಯಿತು.
ಮುಖಂಡರಾದ ಸುರೇಶ ತಳವಾರ, ಉದಯ ಹುಕ್ಕೇರಿ, ಮುತ್ತಣ್ಣಾ ರಾಯಣ್ಣವರ, ರಾಘವೇಂದ್ರ ಸನದಿ, ಅಪ್ಪಾಸಾಬ ಬ್ಯಾಳಿ, ರಾವಸಾಬ ಫಕೀರೆ, ಸುದರ್ಶನ ತಮ್ಮಣ್ಣವರ, ಆನಂದ ಅರಬಳ್ಳಿ, ಶ್ರೀಕಾಂತ ತಳವಾರ, ಎಂ.ಆರ್.ಮುನ್ನೋಳಿಕರ, ವಿದ್ಯಾದರ ಚಿತಳೆ, ದೀಪಕ ವೀರಮುಖ, ಕುಮಾರ ತಳವಾರ, ಅಮರ ಶಿಂಗೆ, ಬಾಬುರಾವ ಘಟ್ಟಿ, ಶಿವು ಮಧಾಳೆ, ಬಸವರಾಜ ತಳವಾರ, ಅಪ್ಪಣ್ಣಾ ಖಾತೇದಾರ, ಮಾರುತಿ ಜೋಡಕುರಳಿ, ಮಹೇಶ ಧಾಣೆ, ಉದಯ ಮಾಳಗೆ, ಶಂಕರ ತಿಪ್ಪನಾಯಿಕ, ವಿನೋದ ಮಾಳಗೆ ಮತ್ತಿತರರು ಉಪಸ್ಥಿತರಿದ್ದರು.
