Chikkodi

ಪಾನ್‌ ಶಾಪ್ ಮಾಲೀಕನ ಪ್ರಾಮಾಣಿಕತೆ: 10 ಸಾವಿರವಿದ್ದ ಪರ್ಸ್ ವಾರಸುದಾರರಿಗೆ ಹಸ್ತಾಂತರ

Share

ಕಳೆದುಹೋಗಿದ್ದ ಹಣ ಹಾಗೂ ಪ್ರಮುಖ ದಾಖಲೆಗಳಿದ್ದ ಪಾಕೀಟನ್ನು ವಾರಸುದಾರರನ್ನು ಪತ್ತೆಹಚ್ಚಿ ವಾಪಸ್ ನೀಡುವ ಮೂಲಕ ಚಿಕ್ಕೋಡಿ ಪಾನ್ ಶಾಪ್ ಮಾಲೀಕರೊಬ್ಬರು ಅಪರೂಪದ ಪ್ರಾಮಾಣಿಕತೆ ಮೆರೆದಿದ್ದಾರೆ.

ಚಿಕ್ಕೋಡಿ ಪಟ್ಟಣದ ರಾಘವೇಂದ್ರ ಹೋಟೆಲ್ ಪಕ್ಕದಲ್ಲಿ ರಾಜೀವ ಶೆಟ್ಟಿ ಎಂಬುವರು ಪಾನ್ ಶಾಪ್ ನಡೆಸುತ್ತಿದ್ದಾರೆ. ಇವರ ಅಂಗಡಿಯ ಮುಂಭಾಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಪರ್ಸ್ ಕೆಳಗೆ ಬಿದ್ದಿತ್ತು. ಇದನ್ನು ಗಮನಿಸಿದ ರಾಜೀವ ಶೆಟ್ಟಿ ಅವರು ಪರ್ಸ್ ತೆಗೆದು ಪರಿಶೀಲಿಸಿದಾಗ‌ ಅದರಲ್ಲಿ 10,000 ನಗದು ಹಣ ಹಾಗೂ ಮಹತ್ವದ ವಿ.ಆರ್.ಎಲ್ ಪ್ರಯಾಣದ ಟಿಕೆಟ್‌ ಇರುವುದು ಕಂಡುಬಂದಿದೆ.

ಸ್ವಲ್ಪ ಸಮಯದ ಬಳಿಕ ಪರ್ಸ್ ಕಳೆದುಕೊಂಡ ವ್ಯಕ್ತಿಯು ಗಾಬರಿಯಿಂದ ಹುಡುಕುತ್ತಾ ಅದೇ ಜಾಗಕ್ಕೆ ಬಂದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರಾಜೀವ ಶೆಟ್ಟಿ ಅವರು ಸೂಕ್ತ ವಿಚಾರಣೆ ನಡೆಸಿ ಆ ವ್ಯಕ್ತಿಯೇ ವಾರಸುದಾರರೆಂದು ಖಚಿತಪಡಿಸಿಕೊಂಡು ಹಣ ಹಾಗೂ ದಾಖಲೆಗಳಿದ್ದ ಪರ್ಸ್ ಅನ್ನು ಸುರಕ್ಷಿತವಾಗಿ ಮರಳಿ ನೀಡಿದ್ದಾರೆ. ತಮ್ಮ ಕಳೆದುಹೋದ ಹಣ ಸಿಕ್ಕಿದ್ದರಿಂದ ನಿರಾಳರಾದ ವಾರಸುದಾರರು ಮಾಲೀಕರಿಗೆ ಕೃತಜ್ಞತೆ ಸಲ್ಲಿಸಿದರು.

ರಾಜೀವ ಶೆಟ್ಟಿ ಅವರ ಈ ಶ್ಲಾಘನೀಯ ಕಾರ್ಯವನ್ನು ಗುರುತಿಸಿ ಸಮಾಜ ಸೇವಕರಾದ ಚಂದ್ರಕಾಂತ ಹುಕ್ಕೇರಿ, ಪತ್ರಕರ್ತ ಸುದೀರ ಕುಂಭೋಜಕರ ಹಾಗೂ ಅಶೋಕ ಶೆಟ್ಟಿ ಅವರು ರಾಜೀವ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಇಂದಿನ ಕಲಿಯುಗದಲ್ಲೂ ಇಂತಹ ಪ್ರಾಮಾಣಿಕತೆ ಮೆರೆದ ಪಾನ್ ಶಾಪ್ ಮಾಲೀಕರ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ

Tags:

error: Content is protected !!