ಭಕ್ತಿ ಮಾಡುವುದರಿಂದ ಚಂಚಲವಾಗಿರುವ ಮನಸ್ಸು ನಿಯಂತ್ರಣದಲ್ಲಿರುತ್ತದೆ. ಮನುಷ್ಯ ಜೀವಿಗೆ ಜ್ಞಾನ ಎನ್ನುವುದು ಒಂದು ರತ್ನವಿದ್ದಂತೆ. ಅಂತಹ ಸದ್ಗುರು ಬಸವಪ್ರಭು ಮಹಾರಾಜರು ತಮ್ಮ ಶಿಷ್ಯವೃಂದಕ್ಕೆ ಭಕ್ತಿ, ಜ್ಞಾನ ಹಾಗೂ ವೈರಾಗ್ಯ ಎಂಬ ಮೂರು ರತ್ನಗಳ ಉಪದೇಶ ನೀಡಿ, ಗುರುಭಕ್ತಿಯ ಸನ್ಮಾರ್ಗವನ್ನು ತೋರಿಸಿಕೊಟ್ಟಿದ್ದಾರೆ ಎಂದು ನೀಡಸೋಶಿಯ ಸಿದ್ದ ಸಂಸ್ಥಾನ ಮಠದ ಡಾ. ಪಂಚಮಶಿವಲಿಂಗೇಶ್ವರ ಮಹಾಸ್ವಾಮೀಜಿಯವರು ಅಭಿಪ್ರಾಯಪಟ್ಟರು.

ಚಿಕ್ಕೋಡಿ ತಾಲೂಕಿನ ಮಜಲಟ್ಟಿಯ ಸದ್ಗುರು ಕಲ್ಮೇಶ್ವರ ಅಲ್ಲಮಪ್ರಭು ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸದ್ಗುರು ಬಸವಪ್ರಭು ಮಹಾರಾಜರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಚಿಕ್ಕೋಡಿ ಸಂಪಾದನ ಚರಮೂರ್ತಿ ಮಠದ ಸಂಪಾದನ ಮಹಾಸ್ವಾಮೀಜಿಯವರು ಸದ್ಗುರು ಬಸವಪ್ರಭು ಮಹಾರಾಜರು ಪ್ರಪಂಚದಲ್ಲಿದ್ದೂ ಪಾರಮಾರ್ಥವನ್ನು ಗೆದ್ದವರು. ಅಂತಹ ಸದ್ಗುರುಗಳು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಸದ್ಗುರು ಪರಂಪರೆಯನ್ನು ಬೆಳೆಸಿದರು. ಸರಳತೆಯಲ್ಲಿಯೇ ಪರಮಾರ್ಥ ಜೀವನ ಸವೆಸಿದ ಅವರು, ಪರಮಾನಂದ ಸುಖಕ್ಕೆ ಆಧ್ಯಾತ್ಮದ ಸುಗಂಧವನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ಮೌಜೆ ವಡಗಾಂವದ ಆದಿನಾಥ ಮಹಾರಾಜರು ಮಾತನಾಡಿ ನಮ್ಮ ಬದುಕು ಮೂರು ದಿನದ ಸಂತೆ ಇದ್ದ ಹಾಗೆ. ಹುಟ್ಟು-ಸಾವುಗಳ ಮಧ್ಯದ ಈ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕಾದರೆ ನಾವು ಸಂತ-ಶರಣರ ಸಂಘದಲ್ಲಿ ಬೆರೆಯಬೇಕು. ಸದ್ಗುರುಗಳ ಜ್ಞಾನದ ಉಪದೇಶವನ್ನು ಪಡೆದು ಪುನೀತರಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ನೇತೃತ್ವವನ್ನು ಮಾತೋಶ್ರೀ ಸಾವಿತ್ರಮ್ಮಾ ಪಾಟೀಲ ವಹಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ವಾದ್ಯ ಮೇಳ ಹಾಗೂ ಕುಂಭಮೇಳದೊಂದಿಗೆ ಸದ್ಗುರುಗಳ ಭವ್ಯ ಭಾವಚಿತ್ರದ ಮೆರವಣಿಗೆ ಜರುಗಿತು. ನಂತರ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಲಾವಿದರು ಭಜನಾ ಸೇವೆಯನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಶರಣರಾದ ರಾಮ ಶಿರಢೋಣಿ, ಕಲ್ಲಪ್ಪ ಜನವಾಡೆ, ಹನುಮಂತ ಶಾಸ್ತ್ರಿಗಳು, ಬಸವಪ್ರಭು ಕುಂಡ್ರುಕು ಹಾಗೂ ಶರತ್ ಪಾಟೀಲ ಉಪಸ್ಥಿತರಿದ್ದರು. ಶಿಂದಿಹಟ್ಟಿಯ ಗೌತಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಭರತ ಕಲಾಚಂದ್ರ ಕಾರ್ಯಕ್ರಮ ನಿರೂಪಿಸಿದರೆ, ಲಗಮಣ್ಣಾ ತೋರಣಹಳ್ಳಿ ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.
