ಬಸ್ ನಿಲ್ದಾಣಗಳ ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡು ಮಹಿಳಾ ಪ್ರಯಾಣಿಕರ ಕತ್ತಿನಲ್ಲಿದ್ದ ಚಿನ್ನಾಭರಣ ದೋಚುತ್ತಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಖತರ್ನಾಕ್ ಮಹಿಳಾ ಕಳ್ಳಿಯರನ್ನು ಅಥಣಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ ಬರೋಬ್ಬರಿ 68 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರ ಈ ಯಶಸ್ವಿ ಕಾರ್ಯಾಚರಣೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಅಥಣಿ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಭಾರಿ ದೊಡ್ಡ ಕಳ್ಳತನ ಜಾಲವೊಂದು ಬೆಳಕಿಗೆ ಬಂದಿದೆ. ಬಂಧಿತರನ್ನು ಮಹಾರಾಷ್ಟ್ರ ಮೂಲದ ಹೇಮಾ ಕಸಬೇಕರ ಹಾಗೂ ನಿಲಂ ಕಾಂಬಳೆ ಎಂದು ಗುರುತಿಸಲಾಗಿದೆ. ಈ ಅಂತಾರಾಜ್ಯ ಮಹಿಳಾ ಕಳ್ಳಿಯರು ಸಾರ್ವಜನಿಕರು ಬಸ್ ಹತ್ತುವ ಹಾಗೂ ಇಳಿಯುವ ಸಮಯದಲ್ಲಿ ಉಂಟಾಗುವ ಗದ್ದಲ, ತಳ್ಳಾಟ ಮತ್ತು ಜನದಟ್ಟಣೆಯನ್ನೇ ತಮ್ಮ ಕಳ್ಳತನಕ್ಕೆ ಬಂಡವಾಳ ಮಾಡಿಕೊಳ್ಳುತ್ತಿದ್ದರು. ಪ್ರಯಾಣಿಕರ ರೂಪದಲ್ಲೇ ಬಂದು ಯಾರಿಗೂ ಅನುಮಾನ ಬಾರದಂತೆ ಮಹಿಳಾ ಪ್ರಯಾಣಿಕರ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದರು.

ಬಂಧಿತ ಮಹಿಳೆಯರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ನಾಲ್ಕು ಪ್ರಮುಖ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಆರೋಪಿಗಳಿಂದ ಸದ್ಯ ಸುಮಾರು 68 ಲಕ್ಷ ರೂಪಾಯಿ ಮೌಲ್ಯದ 42.5 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದಾ ಸಾರ್ವಜನಿಕ ವಲಯದಲ್ಲಿ ಭೀತಿ ಹುಟ್ಟಿಸಿದ್ದ ಈ ಕಿಲಾಡಿ ಕಳ್ಳಿಯರ ಬಂಧನದಿಂದ ಅಥಣಿ ಭಾಗದ ಪ್ರಯಾಣಿಕರು ಹಾಗೂ ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಸಮಯಪ್ರಜ್ಞೆ ಮೆರೆದು ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾದ ಅಥಣಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.
