ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಲು ಯಾವುದೇ ತೊಂದರೆಯಿಲ್ಲ, ಅದನ್ನು ಖಂಡಿತ ಮಾಡೋಣ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಕನ್ನಡ ಸಂಘಟನೆಗಳ ಮುಖಂಡರಿಗೆ ಸ್ಪಷ್ಟ ಭರವಸೆ ನೀಡಿದ್ದಾರೆ.


ರವಿವಾರ ಮುಂಜಾನೆ ಬೆಳಗಾವಿಗೆ ಆಗಮಿಸಬೇಕಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕಾರ್ಯಕ್ರಮ ಕೊನೆಯ ಘಳಿಗೆಯಲ್ಲಿ ರದ್ದಾದ ಹಿನ್ನೆಲೆಯಲ್ಲಿ, ಪ್ರವಾಸಿ ಮಂದಿರದ ಮೆಟ್ಟಿಲುಗಳ ಮೇಲೆ ಕೆಲಕಾಲ ಕಾಯ ಕುಳಿತಿದ್ದ ಕನ್ನಡ ಹೋರಾಟಗಾರರು ಅಲ್ಲಿಗೆ ಆಗಮಿಸಿದ ಎನ್. ರವಿಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಿಜೆಪಿ ಬಹುಮತ ಹೊಂದಿರುವ ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಪರ ಗೊತ್ತುವಳಿ ಪಾಸು ಮಾಡುವ ಅವಶ್ಯಕತೆಯನ್ನು ಮುಖಂಡರು ವಿವರಿಸಿದಾಗ, ಸಕಾರಾತ್ಮಕವಾಗಿ ಸ್ಪಂದಿಸಿದ ರವಿಕುಮಾರ್ ಅವರು, ನಿರ್ಣಯ ಕೈಗೊಳ್ಳಲು ಯಾವುದೇ ಅಡ್ಡಿಯಿಲ್ಲ ಎಂದು ಧೈರ್ಯ ತುಂಬುವ ಮೂಲಕ ಗಡಿಭಾಗದ ಕನ್ನಡ ಹೋರಾಟಗಾರರ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ.


