ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಸುಮಾರು 4,500 ಕೋಟಿ ರೂಪಾಯಿ ಹೂಡಿಕೆ ವಂಚನೆ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸುವ ಕುರಿತು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಇಂದು ಅತ್ಯಂತ ಮಹತ್ವದ ಉನ್ನತ ಮಟ್ಟದ ಸಭೆ ನಡೆಯಿತು.


ಬೆಳಗಾವಿ ನಗರ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಭೆಗೆ ಸಿಐಡಿ ಡಿಐಜಿ ಭೀಮಾಶಂಕರ್ ಗುಳೇದ್ ಸೇರಿದಂತೆ ಮೂವರು ಪ್ರಮುಖ ತನಿಖಾಧಿಕಾರಿಗಳ ತಂಡ ಆಗಮಿಸಿತ್ತು. ಸಭೆಯಲ್ಲಿ ಮಾರ್ಕೆಟ್ ವಿಭಾಗದ ಎಸಿಪಿ, ಮಾಳಮಾರುತಿ ಸಿಪಿಐ ಹಾಗೂ ಸಿಇಎನ್ (CEN) ಪೊಲೀಸ್ ಠಾಣೆಯ ಸಿಪಿಐ ಕೂಡ ಭಾಗವಹಿಸಿದ್ದು, ಇದುವರೆಗೆ ಸ್ಥಳೀಯ ಪೊಲೀಸರು ನಡೆಸಿದ ತನಿಖೆ, ಜಪ್ತಿ ಮಾಡಲಾದ ಪ್ರಮುಖ ದಾಖಲೆಗಳು ಮತ್ತು ಜಾಲತಾಣ ಆಧಾರಿತ ಡಿಜಿಟಲ್ ಪುರಾವೆಗಳ ಬಗ್ಗೆ ಸಿಐಡಿ ಅಧಿಕಾರಿಗಳು ಸಮಗ್ರ ಮಾಹಿತಿ ಪಡೆದುಕೊಂಡರು. ಸಭೆ ಮುಗಿಯುತ್ತಿದ್ದಂತೆಯೇ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಅಧಿಕೃತ ಕಡತಗಳು ಹಾಗೂ ವಶಪಡಿಸಿಕೊಳ್ಳಲಾದ ಮಹತ್ವದ ದಾಖಲೆಗಳನ್ನು ಸಿಐಡಿ ತಂಡವು ತನ್ನ ಸುಪರ್ದಿಗೆ ಪಡೆದುಕೊಳ್ಳಲಿದ್ದು, ಇಂದಿನಿಂದಲೇ ಅಧಿಕೃತವಾಗಿ ಭರ್ಜರಿ ತನಿಖೆ ಆರಂಭಿಸಲಿದೆ.

