ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ 70 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪರ ಅಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರು ಹಗಲಿರುಳು ದುಡಿದಿದ್ದು ಸಧ್ಯ ಇತಿಹಾಸ. ಆದರೆ ತಮಗಾಗಿ ದುಡಿದ ನಾಯಕರನ್ನೇ ಶಾಸಕ ಲಕ್ಷ್ಮಣ ಸವದಿ ಬಣ ತುಳಿಯುವ ಕೆಸಲ ಮಾಡುತ್ತಿದೆಯಾ ಎಂಬ ಪ್ರಶ್ನೆ ಕಾಂಗ್ರೆಸ್ ನಲ್ಲಿ ಮೂಡಿದೆ.


ದ್ವೇಷ ರಾಜಕಾರಣಕ್ಕೆ ಸಾಕ್ಷಿ ಎಂಬಂತೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಗಜಾನನ ಮಂಗಸೂಳಿ ಸವದಿ ಆಗಮನದ ಕಾರಣಕ್ಕೆ ಟಿಕೆಟ್ ವಂಚಿತರಾಗಿದ್ದರು. ಉಪ ಚುನಾವಣೆಯಲ್ಲಿ ಸೋಲುವುದರ ಜೊತೆ ಪಕ್ಷಕ್ಕಾಗಿ ಕೋಟ್ಯಾಂತರ ರೂ. ಹಣ ಕಳೆದುಕೊಂಡರೂ ಹಿರಿಯ ನಾಯಕರ ಮಾತು ಹಾಗೂ ಲಕ್ಷ್ಮಣ ಸವದಿ ಅನಿವಾರ್ಯತೆ ಕಾರಣಕ್ಕೆ ಕೈ ಟಿಕೆಟ್ ತ್ಯಾಗ ಮಾಡಿದ್ದು ಇದೇ ಮಂಗಸೂಳಿ.

ಆದರೆ ಇಷ್ಟೇಲ್ಲಾ ತ್ಯಾಗ ಮಾಡಿದ್ದ ಗಜಾನನ ಮಂಗಸೂಳಿ ವಿರುದ್ಧ ಶಾಸಕ ಸವದಿ ಗುಂಪು ದ್ವೇಷ ರಾಜಕಾರಣ ಮಾಡುತ್ತಿರುವುದು ಏಕೆ ಎಂಬುವುದು ಮೂಲ ಕಾಂಗ್ರೆಸ್ಸಿಗರ ಪ್ರಶ್ನೆ. ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ವೇಳೆ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಪಕ್ಕದಲ್ಲಿ ನಿಂತಿದ್ದ ಗಜಾನನ ಮಂಗಸೂಳಿ ಅವರ ಫೋಟೋ ಅಳಿಸಿ ಹಾಕುವ ಮಟ್ಟಿಗೆ ದ್ವೇಷದ ರಾಜಕಾರಣ ಮಾಡುತ್ತಿರುವುದು ಏಕೆ ಎಂಬುದು ಮಂಗಸೂಳಿ ಆಪ್ತರಿಂದ ವ್ಯಕ್ತವಾದ ಆಕ್ರೋಶ.
ಕೋಟ್ಯಾಂತರ ಹಣ ಖರ್ಚು ಮಾಡಿ 2019 ರ ಉಪ ಚುನಾವಣೆಯಿಂದ ಹಿಡಿದು 2023 ರ ವರೆಗೆ ಅಥಣಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸ ಮಾಡಿದ್ದು ಇದೇ ಗಜಾನನ ಮಂಗಸೂಳಿ. ಆದರೆ ತಮ್ಮ ರಾಜಕೀಯ ಏರಿಳಿತದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ ಆ ಸಂದರ್ಭದಲ್ಲಿ ಗಜಾನನ ಮಂಗಸೂಳಿ ಅವರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂಬ ಮಾತನ್ನೂ ಕೊಟ್ಟಿದ್ದರು.
ಚುನಾವಣೆಯಲ್ಲಿ ಗೆದ್ದು ಶಾಸಕರಾದ ಮೇಲೆ ಅಥಣಿಯಲ್ಲಿ ಮೂಲ ಕಾಂಗ್ರೆಸ್ ನಾಯಕರನ್ನು ತುಳಿಯುವ ಕೆಲಸ ಇದೇ ಲಕ್ಷ್ಮಣ ಸವದಿ ಮಾಡುತ್ತಿದ್ದಾರೆ. ಜೊತೆಗೆ ಸವದಿಗಾಗಿ ಟಿಕೆಟ್ ತ್ಯಾಗ ಮಾಡಿದ್ದ ಗಜಾನನ ಮಂಗಸೂಳಿ ಅವರನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನ ಸದಾಕಾಲವೂ ಸವದಿ ಬಣ ಮಾಡುತ್ತಿದೆ ಎಂಬುದು ಮೂಲ ಕಾಂಗ್ರೆಸ್ ನಾಯಕರ ಆರೋಪವಾಗಿದೆ.
ಸಧ್ಯ ಗಜಾನನ ಮಂಗಸೂಳಿ ಚಿತ್ರ ಅಳಿಸಿ ಹಾಕಿ ಚಿದಾನಂದ ಸವದಿ ಮಾಡಿರುವ ಫೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಲಕ್ಷ್ಮಣ ಸವದಿ ಸ್ವಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ ನಾಯಕರಿಗೆ ಇಷ್ಟೆಲ್ಲ ಅನ್ಯಾಯ ಮಾಡುತ್ತಿದ್ದಾರೆ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇವೆ ಎನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕರು.
