Athani

ಒಂದು ಬಾವಿ, ಎರಡು ಕೊಲೆ; ನ್ಯಾಯಕ್ಕಾಗಿ ಕೋರ್ಟ್‌ಗೆ ಹೊರಟಿದ್ದವ ಸೇರಿದ ಮಸಣ

Share

• ಸಾಕ್ಷಿ ಹೇಳಲು ತೆರಳುತ್ತಿದ್ದವನ ಬರ್ಬರ ಹತ್ಯೆ ಶಂಕೆ
• ಮಹಾರಾಷ್ಟ್ರದಲ್ಲಿ ಕಿಡ್ನಾಪ್, ಅಥಣಿಯಲ್ಲಿ ಶವ ಪತ್ತೆ
• ಮಗ, ತಮ್ಮನ ಕೊಲೆಗೆ ಸಾಕ್ಷಿಯಾಗಿದ್ದ ದಾದಾಸೋ
• ಜಂಟಿ ತನಿಖೆಗೆ ಇಳಿದ ಮಹಾರಾಷ್ಟ್ರ-ಕರ್ನಾಟಕ ಪೊಲೀಸ್

ಕಳೆದ ಮೂರು ವರ್ಷಗಳ ಹಿಂದೆ ಒಂದು ಬಾವಿಗಾಗಿ ಜೋಡಿ ಕೊಲೆ ನಡೆದಿತ್ತು. ಇದೇ ವಿಚಾರವಾಗಿ ಏಳು ಜನ ಆರೋಪಿಗಳು ಜೈಲು ಪಾಲಾಗಿದ್ದರು. ಕಣ್ಣಾರೆ ನೋಡಿದ್ದ ಕೊಲೆ ಬಗ್ಗೆ ಸಾಕ್ಷಿ ಹೇಳಲು ಹೊರಟಿದ್ದ ವ್ಯಕ್ತಿ, ಇಂದು ಕೋರ್ಟ್‌ ತಲುಪುವ ಮೊದಲೇ ಶವವಾಗಿ ಪತ್ತೆಯಾಗಿದ್ದಾನೆ.
ಹೀಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ವ್ಯಕ್ತಿಯ ಹೆಸರು ದಾದಾಸೋ ಇಮಗರ (56). ಈತ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆ, ಜತ್ ತಾಲೂಕಿನ ಕೊಸಾರಿ ಗ್ರಾಮದವನು. ಮೂರು ವರ್ಷದ ಹಿಂದೆ ಒಂದು ಬಾವಿಯ ವಿಚಾರವಾಗಿ ಸಂಬಂಧಿಕರೇ ತನ್ನ ಸ್ವಂತ ಮಗ ಹಾಗೂ ತಮ್ಮನನ್ನು ಕೊಲೆ ಮಾಡಿದ್ದರು ಎಂದು ಈತ ಹತ್ತು ಜನರ ವಿರುದ್ಧ ದೂರು ದಾಖಲಿಸಿದ್ದನು. ಈ ಪೈಕಿ ಮೂವರಿಗೆ ಜಾಮೀನಾಗಿದ್ದು, ಏಳು ಜನ ನ್ಯಾಯಾಂಗ ಬಂಧನದಲ್ಲಿದ್ದಾರೆ. ನಿನ್ನೆ ಸಾಂಗ್ಲಿ ಕೋರ್ಟ್‌ನಲ್ಲಿ ಕೊಲೆ ವಿಚಾರವಾಗಿ ಸಾಕ್ಷಿ ಹೇಳಲು ಹೊರಟಿದ್ದ ದಾದಾಸೋ ಇಮಗರನನ್ನು ನಾಗಜ್ ಕ್ರಾಸ್ ಬಳಿ ಅಪರಿಚಿತರು ಅಪಹರಿಸಿದ್ದರು. ಈ ಸಂಬಂಧ ನಿನ್ನೆ ಬೆಳಿಗ್ಗೆ ಜತ್ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಾಗಿತ್ತು.
ಇಂದು ಬೆಳಿಗ್ಗೆ ಬೆಳಗಾವಿಯ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯ ಹಣಮಾಪುರ ಹೊರವಲಯದ ಜಂಬಗಿ ರಸ್ತೆ ಪಕ್ಕದ ಮರವೊಂದರಲ್ಲಿ ಇವನ ಶವ ಪತ್ತೆಯಾಗಿದೆ. ಕುಟುಂಬಸ್ಥರು ಇದು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ಕೈ ಹಾಗೂ ಬೆರಳುಗಳಿಗೆ ಗಾಯದ ಗುರುತುಗಳು ಪತ್ತೆಯಾಗಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬರಬೇಕಿದೆ.

Tags:

error: Content is protected !!