Athani

ಎಸ್ಸೆಸ್ಸೆಲ್ಸಿ ಪರೀಕ್ಷೆ: 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಥಣಿಯ ವಿದ್ಯಾರ್ಥಿನಿ

Share

ಅಥಣಿ ತಾಲೂಕಿನ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಸಾಧ್ಯವೆನಿಸುವ ಸಾಧನೆಯನ್ನು ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದಾಳೆ. 625ಕ್ಕೆ 625 ಅಂಕಗಳನ್ನು ಪಡೆದು ತಾಲೂಕಿನ ಕೀರ್ತಿಯನ್ನು ಪ್ರಾರ್ಥನಾ ಬಿರಾದಾರ ಹೆಚ್ಚಿಸಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರಕಾರಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ, ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಸಾಧನೆ ಮಾಡಿದ್ದಾಳೆ. ಸಾಮಾನ್ಯ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರೂ, ಆರ್ಥಿಕ ಮುಗ್ಗಟ್ಟು ಹಾಗೂ ಗ್ರಾಮೀಣ ಪರಿಸರದ ಸವಾಲುಗಳನ್ನು ಮೆಟ್ಟಿ ನಿಂತ ಪ್ರಾರ್ಥನಾ, ತನ್ನ ಶಿಸ್ತುಬದ್ಧ ಅಧ್ಯಯನ ಮತ್ತು ದೃಢ ಸಂಕಲ್ಪದಿಂದ ಈ ಐತಿಹಾಸಿಕ ಸಾಧನೆಯನ್ನು ದಾಖಲಿಸಿದ್ದಾಳೆ. ಗ್ರಾಮೀಣ ಸರಕಾರಿ ಶಾಲೆಯೊಂದರಲ್ಲಿ ಓದಿ ಈ ಮಟ್ಟದ ಸಾಧನೆ ಮಾಡಿರುವುದು ವಿದ್ಯಾರ್ಥಿನಿಯ ಬದ್ಧತೆಯನ್ನು ತೋರಿಸುತ್ತಿದ್ದು, ಆಕೆಯ ಈ ಯಶಸ್ಸಿಗೆ ಶಾಲೆಯ ಶಿಕ್ಷಕರು, ಹೆತ್ತವರು ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇನ್ನು ನಿರೀಕ್ಷೆಗೂ ಮೀರಿ ಅಂಕಗಳು ದೊರೆತಿವೆ. ಶಿಕ್ಷಕರು ಮತ್ತು ಪಾಲಕರು ನಮಗೆ ಯೋಗ್ಯ ಮಾರ್ಗದರ್ಶನ ಮಾಡಿದ್ದಾರೆ. ಮುಂದೆ ಪಿಯುಸಿಯಲ್ಲಿ ಸೈನ್ಸ್ ವಿಭಾಗದಲ್ಲಿ ಪ್ರವೇಶಾತಿ ಪಡೆದು ನೀಟ್ ಪರೀಕ್ಷೆ ಬರೆಯುವುದಾಗಿ ವಿದ್ಯಾರ್ಥಿನಿ ಪ್ರಾರ್ಥನಾ ತಿಳಿಸಿದರು.

ಖಾಸಗಿಯಂತೆಯೇ ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತದೆ ಎಂಬುದಕ್ಕೆ ನಮ್ಮ ಮಗಳ ಸಾಧನೆಯೇ ಸಾಕ್ಷಿ ಎಂದು ಪಾಲಕರು ಹರ್ಷ ವ್ಯಕ್ತ ಪಡಿಸಿದ್ದಾರೆ.

Tags:

error: Content is protected !!