• ಕಲ್ಲು ಗಣಿಗಾರಿಕೆ ಧೂಳಿಗೆ ಕುಟುಂಬ ತತ್ತರ
• ಹತ್ತು ವರ್ಷಗಳಿಂದ ಆಡಳಿತದ ತೀವ್ರ ನಿರ್ಲಕ್ಷ್ಯ
• ಅಥಣಿ ತಹಶೀಲ್ದಾರ್ ಕಚೇರಿ ಮುಂದೆ ಧರಣಿ
• ಸುಡು ಬಿಸಿಲಲ್ಲಿ ಮಕ್ಕಳೊಂದಿಗೆ ವಿನೂತನ ಪ್ರತಿಭಟನೆ

ಕಲ್ಲು ಗಣಿಗಾರಿಕೆಯ ಧೂಳಿನಿಂದ ಬದುಕು ನರಕವಾಗಿದ್ದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನ್ಯಾಯಕ್ಕಾಗಿ ಅಲೆದಾಡಿ ಸುಸ್ತಾದ ಅಥಣಿಯ ಗಸ್ತಿ ಕುಟುಂಬ ಈಗ ಬೀದಿಗಿಳಿದು ತಹಶೀಲ್ದಾರ್ ಕಚೇರಿ ಮುಂದೆ ಹಸುಗಳೊಂದಿಗೆ ಪ್ರತಿಭಟನೆ ನಡೆಸುತ್ತಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕಲ್ಲು ಗಣಿಗಾರಿಕೆಯ ಧೂಳಿನಿಂದ ಹೈರಾಣಾದ ಗಸ್ತಿ ಕುಟುಂಬವೊಂದು ಇಂದು ನ್ಯಾಯಕ್ಕಾಗಿ ಹಟಕ್ಕೆ ಬಿದ್ದಿದೆ. ಕಳೆದ ಒಂದು ದಶಕದಿಂದ ಗಣಿಗಾರಿಕೆಯ ಮಾಲಿನ್ಯದಿಂದ ತಮ್ಮ ಆರೋಗ್ಯ ಮತ್ತು ಬದುಕು ನಾಶವಾಗುತ್ತಿದೆ ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ, ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈ ಕುಟುಂಬ ಆಡಳಿತದ ವಿರುದ್ಧ ಕೆರಳಿದೆ. ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಸುಡು ಬಿಸಿಲನ್ನು ಲೆಕ್ಕಿಸದೆ ಹಸುಗಳನ್ನು ಕಟ್ಟಿ, ಮಕ್ಕಳೊಂದಿಗೆ ಧರಣಿ ಕುಳಿತಿರುವ ದೃಶ್ಯ ಮನಕಲಕುವಂತಿದೆ. ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಬೇಸತ್ತ ಈ ಕುಟುಂಬ, ತಮಗೆ ಸೂಕ್ತ ನ್ಯಾಯ ಸಿಗುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಅಧಿಕಾರಿಗಳ ಮೌನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
