• “ರಾಜಣ್ಣ ಅವರೇ ಮಾಟ-ಮಂತ್ರದ ಬಗ್ಗೆ ತನಿಖೆ ನಡೆಸಲಿ”: ವಿ.ಎಸ್. ಉಗ್ರಪ್ಪ ಕೌಂಟರ್
• 56% ಮೀಸಲಾತಿ ಕೈತಪ್ಪುತ್ತಿದ್ದರೂ ಜೋಶಿ, ಲಾಡ್ ಮೌನವೇಕೆ?: ಉಗ್ರಪ್ಪ ಪ್ರಶ್ನೆ
• ವಾಲ್ಮೀಕಿ ನಿಗಮದ ಹಗರಣ ಹಾಗೂ ಎಸ್ಟಿ ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಆಕ್ರೋಶ
• ಮಹಿಳಾ ಮೀಸಲಾತಿ ತಕ್ಷಣ ಜಾರಿಯಾಗಲಿ: ಉಗ್ರಪ್ಪ ಆಗ್ರಹ

ಆ್ಯಂಕರ್: 56% ಮೀಸಲಾತಿ ಉಳಿಯಬಾರದು ಎಂಬ ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಗೆ ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಪ್ರತಿಕ್ರಿಯಿಸಿದ್ದಾರೆ. “ಮೀಸಲಾತಿ ಉಳಿಯದಂತೆ ಯಾರಾದರೂ ಮಾಟ-ಮಂತ್ರ ಮಾಡಿಸಿದ್ದಾರಾ ಎಂಬ ಬಗ್ಗೆ ರಾಜಣ್ಣ ಅವರೇ ತನಿಖೆ ಮಾಡಿಸುವುದು ಸೂಕ್ತ” ಎಂದು ಹೇಳುವ ಮೂಲಕ ಉಗ್ರಪ್ಪ ಕೌಂಟರ್ ಕೊಟ್ಟಿದ್ದಾರೆ.
ವರದಿ: ಧಾರವಾಡದಲ್ಲಿ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ರಾಜ್ಯದಲ್ಲಿ 56% ಮೀಸಲಾತಿ ಉಳಿಯಬಾರದು ಎಂದು ಯಾರಾದರೂ ಮಾಟ-ಮಂತ್ರ ಮಾಡಿಸಿದ್ದಾರಾ? ಎಂದು ಕೆ.ಎನ್. ರಾಜಣ್ಣ ಹೇಳಿದ್ದಾರೆ. ಹಾಗೇನಾದರೂ ಸಂಶಯವಿದ್ದಲ್ಲಿ ಅವರೇ ಅದರ ಬಗ್ಗೆ ತನಿಖೆ ನಡೆಸಲಿ,” ಎಂದು ಕುಟುಕಿದರು.
ಇದೇ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಇತ್ತೀಚೆಗೆ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಭ್ರಷ್ಟಾಚಾರ ನಡೆದರೂ ಯಾರೂ ಬಾಯಿ ಬಿಡಲಿಲ್ಲ. SCP ಮತ್ತು TSP ಹಣ ಬೇರೆಡೆಗೆ ವರ್ಗಾವಣೆಯಾದರೂ (Divert) ಯಾರೂ ಮಾತನಾಡಲಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ವ್ಯಾಸಂಗ ಮಾಡುತ್ತಿರುವ ಎಸ್ಟಿ (ST) ವಿದ್ಯಾರ್ಥಿಗಳಿಗೆ ಮಾಶಾಸನ ನೀಡುತ್ತಿಲ್ಲ. ಇದರ ಬಗ್ಗೆ ಇಲ್ಲಿನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಮಾತನಾಡುತ್ತಿಲ್ಲ. ಎಸ್ಸಿ (SC) ಮತ್ತು ಓಬಿಸಿ (OBC) ವಿದ್ಯಾರ್ಥಿಗಳಿಗೆ ಸಿಗುವ ಮಾಶಾಸನ ಎಸ್ಟಿ ವಿದ್ಯಾರ್ಥಿಗಳಿಗೆ ಏಕೆ ನೀಡುತ್ತಿಲ್ಲ?” ಎಂದು ಪ್ರಶ್ನಿಸಿದರು.
“56% ಮೀಸಲಾತಿ ಕೈತಪ್ಪಿ ಹೋಗುತ್ತಿರುವ ಬಗ್ಗೆ ಸಂತೋಷ್ ಲಾಡ್, ಜೋಶಿ ಅಥವಾ ಬೊಮ್ಮಾಯಿ ಸೇರಿದಂತೆ ಯಾರೂ ತುಟಿ ಬಿಚ್ಚುತ್ತಿಲ್ಲ. ದಯಮಾಡಿ ಮೀಸಲಾತಿ ಬಗ್ಗೆ ಧ್ವನಿ ಎತ್ತಿ ಎಂದು ನಾನು ಮನವಿ ಮಾಡುತ್ತಿದ್ದೇನೆ. ನಮ್ಮ ಸಮಾಜದವರೇ ಇದನ್ನು ‘ಕಾಂಪ್ರಮೈಸ್ ಪಾಲಿಟಿಕ್ಸ್’ (ಹೊಂದಾಣಿಕೆ ರಾಜಕೀಯ) ಎನ್ನುತ್ತಾರೆ. ಅನ್ಯಾಯದ ವಿರುದ್ಧ ಬಾಯಿ ಬಿಡುವುದಕ್ಕೂ ಕಾಂಪ್ರಮೈಸ್ ಮಾಡಿಕೊಳ್ಳಬೇಕೆ? ದಯಮಾಡಿ ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ,” ಎಂದು ಎಚ್ಚರಿಕೆ ನೀಡಿದರು.
ಮುಂದುವರಿದು ಮಾತನಾಡಿದ ಅವರು, “ಎಸ್ಸಿ/ಎಸ್ಟಿ ಶಾಸಕರು ಮತ್ತು ಸಂಸದರು ಜನರಿಂದ ಮತ ಪಡೆದಿಲ್ಲವೇ? ಎಲ್ಲ ಜನಪ್ರತಿನಿಧಿಗಳು ಮತ ಪಡೆದ ಮೇಲೆ ಜನರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡದಿದ್ದರೆ ಹೇಗೆ? ಇಂದು ದೇಶದಲ್ಲಿ ಸಂವಿಧಾನದ ವಿಧಿವಿಧಾನಗಳು ಸರಿಯಾಗಿ ಜಾರಿಯಲ್ಲಿಲ್ಲ. ಮನುವಾದಿಗಳಿಗೆ ಶೂದ್ರರನ್ನು ಕಂಡರೆ ಆಗುವುದಿಲ್ಲ. ಅವರು ಶೂದ್ರರನ್ನು ಮತ್ತು ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಾರೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಕುರಿತು ಮಾತನಾಡಿದ ಅವರು, “ಮಹಿಳಾ ಮೀಸಲಾತಿ ತರಬೇಕಾದರೆ ಸಂವಿಧಾನದ ವಿಧಿ 334ಕ್ಕೆ ತಿದ್ದುಪಡಿ ತಂದಿದ್ದೀರಿ, ಅದರಲ್ಲಿ ಏನಿದೆ? ಜನಗಣತಿ ನಡೆಸಿ ಅದರ ಆಧಾರದ ಮೇಲೆ 33% ಮೀಸಲಾತಿ ನೀಡುತ್ತೇವೆ ಎನ್ನುತ್ತೀರಿ. ಮಹಿಳೆಯರಿಗೆ ಮೀಸಲಾತಿ ಕೊಡುತ್ತೇವೆ ಎಂದು ಹೇಳಿ ಮತ ಪಡೆದಿದ್ದೀರಿ. ಆದರೆ ಮಹಿಳೆಯರ ಸಾಂವಿಧಾನಿಕ ಹಕ್ಕನ್ನು ಕಸಿಯುವಂತಿದ್ದರೆ ಅದು ಮಿಸ್ಟರ್ ಮೋದಿ ಅವರಿಂದ ಮಾತ್ರ ಸಾಧ್ಯ. ಇಂದು ಎಸ್ಸಿ, ಎಸ್ಟಿ ಮತ್ತು ಓಬಿಸಿ ಮಹಿಳೆಯರ ಮೇಲೆ ದಾಳಿಗಳಾಗುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಸ್ಸಿ, ಎಸ್ಟಿ ಮತ್ತು ಓಬಿಸಿ ಮೀಸಲಾತಿಯನ್ನು ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಸಬೇಕು. ಮಹಿಳೆಯರಿಗೆ 33% ಮೀಸಲಾತಿ ನೀಡುವುದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಅದನ್ನು ತಕ್ಷಣ ಜಾರಿಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಜನರು ನಿಮಗೆ ಬುದ್ಧಿ ಕಲಿಸುತ್ತಾರೆ,” ಎಂದು ವಾಗ್ದಾಳಿ ನಡೆಸಿದರು.
