Dharwad

ಯೋಗೇಶಗೌಡ ಹತ್ಯೆ ಪ್ರಕರಣ: 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಿನ್ನೆಲೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಸಹೋದರಿ ಅಕ್ಕಮ್ಮ. ಸತ್ಯಕ್ಕೆ ಸಿಕ್ಕಿತು ಅಂತಿಮ ಜಯ

Share

ಹಂತಕರಿಗೆ ಸಿಕ್ಕಿತು ತಕ್ಕ ಶಿಕ್ಷೆ

ಸಿಬಿಐ ತನಿಖೆಗೆ ಕುಟುಂಬದ ಸಲಾಂ

ಧಾರವಾಡದಲ್ಲಿ ಅಕ್ಕಮ್ಮ ಹರ್ಷೋದ್ಗಾರ

ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ಪ್ರಕರಣದ 16 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ, ಧಾರವಾಡದಲ್ಲಿ ಯೋಗೇಶಗೌಡರ ಸಹೋದರಿ ಅಕ್ಕಮ್ಮ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.

ಧಾರವಾಡ ನಗರದ ಗಾಂಧಿಚೌಕ ಬಳಿಯಿರುವ ತಮ್ಮ ನಿವಾಸದ ಮುಂಭಾಗದಲ್ಲಿ ಅಕ್ಕಮ್ಮ ಅವರು ಸ್ವತಃ ಪಟಾಕಿ ಹಚ್ಚಿ ಹರ್ಷ ವ್ಯಕ್ತಪಡಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಈ ಆದೇಶದಿಂದ ಅತ್ಯಂತ ಖುಷಿಯಾಗಿದೆ ಎಂದರು.

“ನಮ್ಮ ತಮ್ಮನ ಸಾವಿಗೆ ಇಂದು ನಿಜವಾದ ನ್ಯಾಯ ಸಿಕ್ಕಿದೆ. ಸಿಬಿಐ ಅಧಿಕಾರಿಗಳ ನಿಷ್ಠಾವಂತ ತನಿಖೆಯಿಂದಾಗಿ ನಮಗೆ ಈ ಜಯ ಲಭಿಸಿದೆ. ಆರಂಭದಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ತಮ್ಮನ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಹರಸಾಹಸ ಪಟ್ಟಿತ್ತು. ಆದರೆ ಪ್ರಕರಣ ಸಿಬಿಐಗೆ ಹಸ್ತಾಂತರವಾದ ಬಳಿಕ ನಮಗೆ ನ್ಯಾಯ ಸಿಗುವ ಭರವಸೆ ಮೂಡಿತ್ತು. ಮಗನ ಸಾವಿಗೆ ನ್ಯಾಯ ಕೊಡಿಸಲು ಹೋರಾಟ ನಡೆಸಿದ ತಾಯಿ ಇಂದು ನಮ್ಮೊಂದಿಗಿಲ್ಲ, ಅತ್ತ ತಮ್ಮನೂ ಇಲ್ಲ. ಆದರೆ ಇಬ್ಬರ ಆತ್ಮಕ್ಕೆ ಸಿಬಿಐ ಅಧಿಕಾರಿ ಬಸವರಾಜ್ ಮಾಗಡಿ (ಕೊರವರ) ಹಾಗೂ ನ್ಯಾಯಾಧೀಶರು ನ್ಯಾಯ ಒದಗಿಸಿಕೊಟ್ಟಿದ್ದಾರೆ. ಎಲ್ಲರ ಸಾಮೂಹಿಕ ಪ್ರಯತ್ನದಿಂದ ಇಂದು ಸತ್ಯಕ್ಕೆ ಜಯ ಸಿಕ್ಕಿದೆ,” ಎಂದು ಭಾವುಕರಾಗಿ ನುಡಿದರು.

Tags:

error: Content is protected !!