1. ಕಂಗ್ರಾಳಿ ಬಿ.ಕೆ.ಯಲ್ಲಿ ಮಹಾಲಕ್ಷ್ಮೀ ಜಾತ್ರೆ ಸಂಪನ್ನ.
2. 43 ವರ್ಷಗಳ ಬಳಿಕ ಅದ್ಧೂರಿ ಉತ್ಸವ
3. ಬುಧವಾರ ರಾತ್ರಿ ನಡೆದ ಭವ್ಯ ಹೊನ್ನಾಟ
4. ಮುಂದಿನ ಜಾತ್ರೆ 16 ವರ್ಷಗಳ ನಂತರ

, ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದಲ್ಲಿ ದಶಕಗಳ ಬಳಿಕ ನಡೆದ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾ ಜಾತ್ರೋತ್ಸವವು ಬುಧವಾರ ರಾತ್ರಿ ಅತ್ಯಂತ ವೈಭವದಿಂದ ಸಂಪನ್ನಗೊಂಡಿದೆ. ಬರೋಬ್ಬರಿ 43 ವರ್ಷಗಳ ನಂತರ ನಡೆದ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಲಕ್ಷಾಂತರ ಭಕ್ತರು, ದೇವಿಯ ದರ್ಶನ ಪಡೆದು ಪುನೀತರಾದರು.
ಕಳೆದ ಒಂಬತ್ತು ದಿನಗಳಿಂದ ಕಂಗ್ರಾಳಿ ಬಿ.ಕೆ. ಗ್ರಾಮದಲ್ಲಿ ನೆಲೆಸಿದ್ದ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀಯ ಜಾತ್ರಾ ಮಹೋತ್ಸವವು ಭಕ್ತಿಭಾವದೊಂದಿಗೆ ಮುಕ್ತಾಯವಾಯಿತು. ಬುಧವಾರ ರಾತ್ರಿ ನಡೆದ ದೇವಿಯ ‘ಹೊನ್ನಾಟ’ ಕಾರ್ಯಕ್ರಮವು ಭಕ್ತರ ಕಣ್ಮನ ಸೆಳೆಯಿತು. ಹೊನ್ನಾಟದ ಬಳಿಕ ತಾಯಿ ಮಹಾಲಕ್ಷ್ಮೀಯು ತನ್ನ ಗದ್ದುಗೆಯನ್ನು ಬಿಟ್ಟು ಸೀಮೆಗೆ ತೆರಳುವ ಮೂಲಕ ಉತ್ಸವಕ್ಕೆ ತೆರೆ ಬಿತ್ತು. ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು.
ಜಾತ್ರೆಯ ಅಂಗವಾಗಿ ಗ್ರಾಮದಲ್ಲಿ ಸತತ 9 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ವಿಶೇಷವಾಗಿ ಹಮ್ಮಿಕೊಳ್ಳಲಾಗಿದ್ದ ಕುಸ್ತಿ ಪಂದ್ಯಾವಳಿಗಳು ಕ್ರೀಡಾಭಿಮಾನಿಗಳ ಗಮನ ಸೆಳೆದವು. ದೇವಸ್ಥಾನ ಪಂಚ ಮಂಡಳಿಯ ನಿರ್ಧಾರದಂತೆ, ಈ ಬಾರಿ 43 ವರ್ಷಗಳ ನಂತರ ನಡೆದ ಈ ಜಾತ್ರೆಯು ಇತಿಹಾಸ ಪುಟ ಸೇರಿದೆ.
ಕಳೆದ 9 ದಿನಗಳಿಂದ ಕಂಗ್ರಾಳಿ ಬಿ.ಕೆ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀಯೂ ಗದ್ದುಗೆಯ ಮೇಲೆ ವಿರಾಜಮಾನಳಾಗಿದ್ದಳು. ಲಕ್ಷಾಂತರ ಭಕ್ತರು ತಾಯಿ ದರ್ಶನವನ್ನು ಪಡೆದುಕೊಂಡಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾಳೆ. ಮುಂದಿನ ಜಾತ್ರೆಯೂ 16 ವರ್ಷದ ಬಳಿಕ ಆಯೋಜಿಸುವ ನಿರ್ಣಯವನ್ನು ದೇವಸ್ಥಾನ ಪಂಚ ಮಂಡಳಿಯೂ ಕೈಗೊಂಡಿದೆ.

ಬೆಳಗಾವಿಯ ಕಂಗ್ರಾಳಿ ಬಿ.ಕೆ ಗ್ರಾಮದೇವತೆ ಶ್ರೀ ಮಹಾಲಕ್ಷ್ಮೀಯ ಜಾತ್ರೆಯೂ ಅತ್ಯಂತ ಭಕ್ತಿಭಾವದಲ್ಲಿ ಈ ಭಾಗದ ಶಾಸಕರು ಮತ್ತು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಎಂ.ಎಲ್.ಸಿ ಚನ್ನರಾಜ್ ಹಟ್ಟಿಹೊಳಿ, ಗ್ರಾ.ಪಂ. ಪಂಚ ಮಂಡಳಿ, ದೇವಸ್ಥಾನ ಮಂಡಳಿ, ಜಾತ್ರೋತ್ಸವ ಕಮೀಟಿ, ಪೊಲೀಸ್ ಸೇರಿದಂತೆ ವಿವಿಧ ಗಣ್ಯರ ಸಹಯೋಗದಲ್ಲಿ ಶಾಂತಿಪೂರ್ಣವಾಗಿ ಸಂಪನ್ನಗೊಂಡಿದೆ ಎಂದು ಯಲ್ಲೋಜಿರಾವ್ ಪಾಟೀಲ್ ಅವರು ತಿಳಿಸಿದರು.
ಹೊನ್ನಾಟದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ದೇವಿಯ ದರ್ಶನವನ್ನು ಕಣ್ತುಂಬಿಕೊಂಡರು.
