Dharwad

ರಾಜ್ಯ ಮಟ್ಟದಲ್ಲೇ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಒತ್ತಾಯ

Share

ನೀಟ್‌ ಹಾಗೂ ಎನ್‌ಇಟಿ ಹಗರಣಗಳನ್ನು ವಿರೋಧಿಸಿ ಎನ್‌ಟಿಎಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ಹಾಗೂ ರಾಜ್ಯ ಮಟ್ಟದಲ್ಲೇ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಆಗ್ರಹಿಸಿ, ಧಾರವಾಡದಲ್ಲಿ ವಿದ್ಯಾರ್ಥಿಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ನಗರದ ವಿವೇಕಾನಂದ ವೃತ್ತದಲ್ಲಿ ಎಐಡಿಎಸ್‌ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಸರ್ಕಾರಗಳ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯಕೀಯ ಶಿಕ್ಷಣಕ್ಕೆ ತೀವ್ರ ಸ್ಪರ್ಧೆ ನಡೆಯುತ್ತಿದ್ದು, ಇದರ ದುರ್ಲಾಭವನ್ನು ಎನ್‌ಟಿಎ ಮತ್ತು ಕೋಚಿಂಗ್ ಸಂಸ್ಥೆಗಳು ಪಡೆಯುತ್ತಿವೆ. ನೀಟ್ ಯುಜಿಯಲ್ಲಿನ ಭ್ರಷ್ಟಾಚಾರವು ಹೊರ ಬಿದ್ದಿರುವ ಬೆನ್ನಲ್ಲೇ, ಎನ್‌ಟಿಎಯಿಂದ ಆಯೋಜಿಸಲ್ಪಟ್ಟ ನೆಟ್ ಪರೀಕ್ಷೆಯನ್ನು ಶಿಕ್ಷಣ ಸಚಿವಾಲಯವು ರದ್ದುಗೊಳಿಸಿದೆ. ಇದರ ಅರ್ಥ ಏನು ಎಂದು ಪ್ರಶ್ನಿಸಿದರು. ಎನ್‌ಟಿಎ ಪ್ರದರ್ಶಿಸುತ್ತಿರುವ ಬೇಜವಾಬ್ದಾರಿ, ಅಸಮರ್ಥತೆ ಮತ್ತು ಪಾರದರ್ಶಕತೆಯ ಕೊರತೆಯು ಮಿಲಿಯಾಂತರ ಅಭ್ಯರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವ್ಯಾಪಾರೀಕರಣ, ಅನಾರೋಗ್ಯ ಪೀಡಿತ ಸ್ಪರ್ಧೆ ಮತ್ತು ವ್ಯಾಪಕ ಭ್ರಷ್ಟಾಚಾರವು ಜಾರಿಯಲ್ಲಿರುವಾಗ, ಒಂದು ಕೇಂದ್ರೀಕೃತ ಪರೀಕ್ಷೆಯು ಭ್ರಷ್ಟಾಚಾರದ ಏಕಸ್ವಾಮ್ಯಾಧಿಕಾರವನ್ನುಂಟು ಮಾಡಬಲ್ಲದೆ ಹೊರತು, ಈ ಯಾವ ಸಮಸ್ಯೆಯನ್ನೂ ಪರಿಹರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ನೀಟ್ ಮತ್ತು ನೆಟ್ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮದ ಕುರಿತು ಸಮರೋಪಾದಿಯಲ್ಲಿ ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು. ಪ್ರಕರಣವು ತಾರ್ಕಿಕ ಅಂತ್ಯ ತಲುಪುವವರೆಗೂ ನೀಟ್ ಕೌನ್ಸೆಲಿಂಗ್‌ಅನ್ನು ತಡೆಹಿಡಿಯಬೇಕು. ನೆಟ್ ಮರುಪರೀಕ್ಷೆಯ ದಿನಾಂಕವನ್ನು ಕೂಡಲೇ ಪ್ರಕಟಿಸಿ, ನೇರವಾಗಿ ಯುಜಿಸಿಯೇ ಪರೀಕ್ಷೆಯನ್ನು ನಡೆಸಬೇಕು ಹಾಗೂ ರಾಜ್ಯ ಮಟ್ಟದಲ್ಲಿಯೇ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸಬೇಕೆಂದು ಎಂದು ಆಗ್ರಹಿಸಿದರು.

Tags:

error: Content is protected !!