ಬಡವರಿಗೆ ಸೇರಬೇಕಿದ್ದ ಪಡಿತರ ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲವನ್ನು ಬಳ್ಳಾರಿ ಅಧಿಕಾರಿಗಳು ಬೇಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎಪಿಎಂಸಿ ಮಾರುಕಟ್ಟೆಯ ಆರು ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಅಧಿಕಾರಿಗಳು ಅಕ್ರಮ ದಾಸ್ತಾನು ಪತ್ತೆಹಚ್ಚಿದ್ದಾರೆ.

ಬಳ್ಳಾರಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಬಡವರಿಗೆ ಸೇರಬೇಕಿದ್ದ ಪಡಿತರ ರಾಗಿಯನ್ನು ಅಕ್ರಮವಾಗಿ ಖರೀದಿಸಿ ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ರಾಜೇಶ್ ಎಚ್.ಡಿ ನೇತೃತ್ವದ ತಂಡ ಆರು ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿ ಅಕ್ರಮ ದಾಸ್ತಾನನ್ನು ಪತ್ತೆಹಚ್ಚಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಪಿಎಂಸಿ ಮಾರುಕಟ್ಟೆಯ ವಿನಯ್, ನಾಗೇಶ್, ಪಿ. ಮಾಬುನ್ನಿ, ಮರೇಗೌಡ, ವೀರಭದ್ರೇಶ್ವರ ಟ್ರೇಡರ್ಸ್ ಹಾಗೂ ಪವಿತ್ರ ಎಂಟರ್‌ಪ್ರೈಸಸ್ ಮಳಿಗೆಗಳ ಮಾಲೀಕರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7ರ ಅಡಿಯಲ್ಲಿ ಬಳ್ಳಾರಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
