ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಪಂಚಾಯಿತಿ ವ್ಯಾಪ್ತಿಯ ಹೊರವಲಯದ ರಾಮನಗರದ ರಸ್ತೆ ಅಭಿವೃದ್ಧಿ ಕಾಮಗಾರಿಗೆ 30 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುನೀಲ ಸಪ್ತಸಾಗರೆ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಅವರ ನಿರಂತರ ಪ್ರಯತ್ನದ ಫಲವಾಗಿ ಈ ಅನುದಾನ ಬಿಡುಗಡೆಯಾಗಿದೆ. ರಸ್ತೆ ಅಭಿವೃದ್ಧಿಗೆ ಶ್ರಮಿಸಿದ ಹುಕ್ಕೇರಿ ಸಹೋದರರಿಗೆ ಪ್ರದೇಶದ ರೈತರ ಪರವಾಗಿ ಧನ್ಯವಾದ ಹಾಗೂ ಅಭಿನಂದನೆಗಳನ್ನು ಸಲ್ಲಿಸಲಿದರು.
ಕಾಮಗಾರಿಯು ರಾಮನಗರದ ಗಣೇಶ ಮಂದಿರದಿಂದ ಪ್ರಾರಂಭಗೊಂಡು ಓಕೇಕೋಡಿ, ಗಿರಗಾಂವೆ ತೋಟದ ಮಾರ್ಗದ ಕರ್ಲಹೊಂಡಲಿಂಗೇಶ್ವರ ದೇವಸ್ಥಾನ, ಕಬಾಡೆ, ಸ್ವಾಮಿ, ಬಾಕಳೆ, ಹಾಗೂ ವಾಳಕಿ ತೋಟದ ಮುಖಾಂತರ ಹುಕ್ಕೇರಿಯವರ ತೋಟದವರೆಗೆ ನಡೆಯಲಿದೆ.
ಈ ರಸ್ತೆ ನಿರ್ಮಾಣದಿಂದ ಈ ಭಾಗದ ರೈತರಿಗೆ ದಿನನಿತ್ಯ ಹೊಲಗದ್ದೆಗಳಿಗೆ ತೆರಳಲು ಮತ್ತು ಕಬ್ಬು ಸುಗ್ಗಿಯ ಸಮಯದಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಸುಲಭವಾಗಿ ಕಬ್ಬು ಸಾಗಣೆ ಮಾಡಲು ವ್ಯಾಪಕ ಅನುಕೂಲವಾಗಲಿದೆ.
ರಸ್ತೆ ಕಾಮಗಾರಿ ಚಾಲನೆ ಸಂದರ್ಭದಲ್ಲಿ ಅಜೀತ ಸಾತಕರ, ಅಜೀತ ಗಿರಗಾಂವೆ, ಸುರೇಶ ಗಿರಗಾಂವೆ, ಮಾರುತಿ ಹವಾಲ್ದಾರ, ದತ್ತಾ ಕಬಾಡೆ, ಅರವಿಂದ ಕಬಾಡೆ, ಬಾಬು ಬಾಕಳೆ, ತಾಕೋಬಾ ಸಾತಕರ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಾದ ವಿಠ್ಠಲ ನಾಯ್ಕ, ಶಿವಗೌಡ ಬಾವಚಿ, ಅರುಣ ಮಗದುಮ್, ಅಂಕುಶ ಮೇತ, ಮಹಾದೇವ ಮಾಳಗೆ, ಪಂಕಜ ಪವಾರ, ಅಣ್ಣಪ್ಪ ರಾಂಗೋಳೆ, ಮುನೀರ ದಾಡಿವಾಲೆ ಸೇರಿದಂತೆ ಸುತ್ತಮುತ್ತಲಿನ ಪರಿಸರದ ರೈತರು ಮತ್ತು ಪ್ರಮುಖರು ಉಪಸ್ಥಿತರಿದ್ದರು.
