ಖಾಸಗಿ ಶಿಕ್ಷಣ ಸಂಸ್ಥೆಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವೆಂಬರ್ 17 ರಂದು ಧಾರವಾಡದಲ್ಲಿ ಬೃಹತ್ ರ್ಯಾಲಿ ನಡೆಸಿ, ನವೆಂಬರ್ 18 ರಿಂದ ಶಾಲಾ-ಕಾಲೇಜುಗಳ ಅನಿರ್ದಿಷ್ಟಾವಧಿ ಮುಷ್ಕರ ಹಾಗೂ ಬಂದ್ ನಡೆಸಲಾಗುವುದು ಎಂದು ಸಿ. ಎಲ್. ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಜಗದೀಶ್ ಕವಟಗಿಮಠ ತಿಳಿಸಿದ್ದಾರೆ.
ಚಿಕ್ಕೋಡಿಯಲ್ಲಿ ನಡೆದ ಶೈಕ್ಷಣಿಕ ಜಿಲ್ಲೆಯ ಎಲ್ಲಾ ಅನುದಾನಿತ ಮತ್ತು ಅನುದಾನರಹಿತ ಶಾಲಾ-ಕಾಲೇಜುಗಳ ಸಂಚಾಲಕರು ಹಾಗೂ ಪ್ರತಿನಿಧಿಗಳ ಪೂರ್ವಭಾವಿ ಸಭೆಯ ನಂತರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ನೌಕರರ ಹೋರಾಟ ಸಮನ್ವಯ ಸಮಿತಿ (ಹುಬ್ಬಳ್ಳಿ) ಇವುಗಳ ಜಂಟಿ ಆಶ್ರಯದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಅಥಣಿ, ಕಾಗವಾಡ ಹಾಗೂ ಮೂಡಲಗಿ ತಾಲೂಕುಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಶಿಕ್ಷಕರ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ಧಾರವಾಡದಲ್ಲಿ ಬೃಹತ್ ಮೋರ್ಚಾ ನಡೆಯಲಿದ್ದು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಚಾಲಕರು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದರು.
ಈ ಸುದ್ದಿಗೋಷ್ಠಿಯಲ್ಲಿ ಚಂದ್ರಕಾಂತ ಕೋಟಿವಾಲೆ, ರಾಜು ಕರಾಳೆ, ಬಿ. ಎ. ಪೂಜಾರಿ, ಸಂಜಯ ಶಿಂತ್ರೇ, ಮಹಾವೀರ ಪಾಟೀಲ, ಉತ್ತಮ ಶಿಂದೆ, ಇನಾಮದಾರ, ಸಾಗರ ಬಿಸ್ಕೋಪ್ ಸೇರಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಮುಖರು ಹಾಗೂ ಸಂಚಾಲಕರು ಉಪಸ್ಥಿತರಿದ್ದರು.
