Chikkodi

ಮಾನಕಾಪುರ ಗ್ರಾಮದಲ್ಲಿ ಬರ್ಬರ ಕೊಲೆ ಪ್ರಕರಣ: 4 ದಿನಗಳಲ್ಲೇ ಆರೋಪಿಯನ್ನು ಬಂಧಿಸಿದ ಸದಲಗಾ ಪೊಲೀಸರು

Share

ತಾಲೂಕಿನ ಮಾನಕಾಪುರದ ಹೊಲವೊಂದರಲ್ಲಿ ಹಗಲುವೇಳೆಯಲ್ಲೇ ನಡೆದಿದ್ದ ವ್ಯಕ್ತಿಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದಲಗಾ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಘಟನೆ ನಡೆದ ಕೇವಲ ನಾಲ್ಕೇ ದಿನಗಳಲ್ಲಿ ಮುಖ್ಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿರೋಳ ತಾಲೂಕಿನ ಶಿರದವಾಡ ಗ್ರಾಮದ ಬಾಳಾಸೋ ಅಣ್ಣಾಸೋ ಮಗದುಮ್ (45) ಬಂಧಿತ ಆರೋಪಿ.
ಅಕ್ಟೋಬರ್ 31ರ ಶನಿವಾರ ಮಧ್ಯಾಹ್ನ 12:30ರ ಸುಮಾರಿಗೆ ಈಚಲಕರಂಜಿ ಪಟ್ಟಣದ ನಿವಾಸಿ, ಪುರೋಹಿತ ಹಾಗೂ ವಧು-ವರರ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಮಂದಾರ ರಾನಡೆ (34) ಎಂಬವರನ್ನು ದ್ವಿಚಕ್ರ ವಾಹನದಲ್ಲಿ ಬೆನ್ನಟ್ಟಿಕೊಂಡು ಬಂದ ಆರೋಪಿ, ಮಾನಕಾಪುರದ ಹೊಲವೊಂದರಲ್ಲಿ ಅವರ ಕಣ್ಣಿಗೆ ಕಾರದ ಪುಡಿ ಎರಚಿ, ಹರಿತವಾದ ಆಯುಧಗಳಿಂದ ಕೊಚ್ಚಿ ಬರ್ಬರ ಕೊಲೆ ಮಾಡಿದ್ದ. ಈ ಭೀಕರ ಘಟನೆಯಿಂದಾಗಿ ಈಚಲಕರಂಜಿ ಹಾಗೂ ಮಾನಕಾಪುರ ಪರಿಸರದಲ್ಲಿ‌ಭೀತಿಯ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಲಭ್ಯವಾದ ಮಾಹಿತಿಯಂತೆ, ಬಂಧಿತ ಆರೋಪಿ ಬಾಳಾಸೋ ಮಗದುಮ್‌ನ ಮಗಳು ಇತ್ತೀಚೆಗೆ ಅಂತರ್ಜಾತಿ ವಿವಾಹವಾಗಿದ್ದಳು. ಈ ಮದುವೆಗೆ ಕೊಲೆಯಾದ ಮಂದಾರ ರಾನಡೆ ಅವರೇ ಸಹಾಯ ಮಾಡಿದ್ದಾರೆ ಎಂದು ಆರೋಪಿ ಸಂಶಯ ವ್ಯಕ್ತಪಡಿಸಿದ್ದ. ಇದೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ಎಸಗಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಸದಲಗಾ ಪೊಲೀಸರು ತಕ್ಷಣವೇ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಸಿಪಿಐ ವಿಶ್ವನಾಥ್ ಚೌಗುಲೆ ಅವರ ಮಾರ್ಗದರ್ಶನದಲ್ಲಿ ಸದಲಗಾ ಠಾಣೆಯ ಪಿಎಸ್ಐ ಬಸನಗೌಡ ನೇರ್ಲಿ ಅವರ ನೇತೃತ್ವದ ತಂಡ ಜಾಲ ಬೀಸಿ ಆರೋಪಿಯನ್ನು ಬಂಧಿಸಿದೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಎಎಸ್‌ಐ ಶಂಕರ್ ಬಾಡಕರ್, ಸಿಬ್ಬಂದಿಗಳಾದ ಸಂಜಯ್ ಜಮಕೋಳಿ, ಸಂತೋಷ್ ಬಡೋದೇ, ಉದಯ್ ಕಾಂಬಳೆ ಹಾಗೂ ವಿಠ್ಠಲ್ ಹಳಬರ ಭಾಗವಹಿಸಿದ್ದರು.

Tags:

error: Content is protected !!