Bagalkote

ಕಬ್ಬಿಗೆ ₹4,250 ಬೆಲೆಗೆ ಪಟ್ಟು: ಮುಧೋಳದಲ್ಲಿ ಇಂದಿನಿಂದ ಉಗ್ರ ರೈತ ಹೋರಾಟ

Share

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬಿಗೆ ಸೂಕ್ತ ಬೆಲೆ ನಿಗದಿಗೆ ಆಗ್ರಹಿಸಿ ರೈತರ ಹೋರಾಟ ಇಂದು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ಕಾರ ಘೋಷಿಸಿರುವ ದರ ಸಾಕಾಗುವುದಿಲ್ಲ ಎಂದು ಆಕ್ರೋಶ ಹೊರಹಾಕಿರುವ ರೈತ ಸಂಘಟನೆಗಳು, ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಆರಂಭಿಸಿವೆ.

ಸರ್ಕಾರ ಪ್ರತಿ ಟನ್ ಕಬ್ಬಿಗೆ ಘೋಷಿಸಿರುವ ₹3,600 ಬೆಲೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿರುವ ಮುಧೋಳ ಭಾಗದ ರೈತರು, ಪ್ರತಿ ಟನ್‌ಗೆ ₹4,250 ಬೆಲೆ ನಿಗದಿಪಡಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ₹300 ನೀಡಿ ಬೆಲೆಯನ್ನು ಎತ್ತರಿಸಬೇಕೆಂಬುದು ರೈತರ ಮುಖ್ಯ ಆಗ್ರಹವಾಗಿದೆ. 90 ಪ್ರತಿಶತ ರೈತರು ಸರ್ಕಾರದ ನಿರ್ಧಾರಕ್ಕೆ ಒಪ್ಪಿದ್ದಾರೆ ಎಂಬ ಸಚಿವರ ಹೇಳಿಕೆಗೆ ತೀವ್ರ ತಿರುಗೇಟು ನೀಡಿರುವ ರೈತ ಮುಖಂಡರು, ಸಚಿವರ ಸಭೆಯ ಒಪ್ಪಂದವನ್ನು ಒಪ್ಪದೆ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ.

ದಿನದಿಂದ ದಿನಕ್ಕೆ ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚ ವಿಪರೀತವಾಗಿ ಹೆಚ್ಚಾಗಿದ್ದು, ಪ್ರಸ್ತುತ ಸಿಗುತ್ತಿರುವ ದರದಿಂದ ರೈತರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಸಕ್ಕರೆ ಕಾರ್ಖಾನೆಗಳು ಸೂಕ್ತ ಬೆಲೆ ನೀಡದೆ ರೈತರನ್ನು ಸತತವಾಗಿ ಶೋಷಣೆ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದ್ದಾರೆ. ಕಬ್ಬಿಗೆ ನ್ಯಾಯಯುತ ಬೆಲೆ ಸಿಗುವವರೆಗೆ ಹಾಗೂ ತಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೆ ಯಾವುದೇ ಕಾರಣಕ್ಕೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹೋರಾಟದ ಕಾವು ಜಿಲ್ಲೆಯಾದ್ಯಂತ ವ್ಯಾಪಿಸುತ್ತಿದ್ದು, ಮುಧೋಳ ತಾಲೂಕಿನ ಸಾವಿರಾರು ರೈತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿ ಬೃಹತ್ ಧರಣಿ ನಡೆಸುತ್ತಿದ್ದಾರೆ. ಕೇವಲ ಬಾಗಲಕೋಟೆ ಮಾತ್ರವಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳ ರೈತರು ಈ ಕಬ್ಬು ಹೋರಾಟಕ್ಕೆ ಕೈಜೋಡಿಸಬೇಕೆಂದು ರೈತ ಮುಖಂಡರು ಕರೆ ನೀಡಿದ್ದಾರೆ. ಬೇಡಿಕೆ ಈಡೇರದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!