ಬಾಗಲಕೋಟೆಯಲ್ಲಿ ಮಹಾತ್ಮಾ ಗಾಂಧಜೀ ಹಾಗೂ ಲಾಲ್ ಬಹಾದ್ಧೂರ್ ಶಾಸ್ತ್ರೀಜೀಯವರ ಜಯಂತಿ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟಿತು. ಜಿಲ್ಲಾಡಳಿತ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಅಧಿಕಾರಿಗಳು ಪಾಲ್ಗೊಂಡು ಮಹಾನ್ ನಾಯಕರಿಗೆ ನಮನ ಸಲ್ಲಿಸಿದರು.ವಿವಿಧ ಧರ್ಮಗುರು ಪವಿತ್ರ ಗ್ರಂಥಗಳನ್ನು ಪಠಿಸಿದರು.


ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಖ್ಯದ್ವಾರದಲ್ಲಿ 157ನೇ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಸಮಾರಂಭವು ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಗುರುಗಳು ಭಗವದ್ಗೀತೆ, ಕುರಾನ್ ಹಾಗೂ ಬೈಬಲ್ ಪಠಣ ಮಾಡಿದ್ದು ವಿಶೇಷವಾಗಿತ್ತು.

ಸಮಾರಂಭದಲ್ಲಿ ಗಾಂಧೀಜಿಯವರ ಅಹಿಂಸೆ, ಸತ್ಯಾಗ್ರಹ ಮತ್ತು ಸರಳ ಜೀವನದ ಆದರ್ಶಗಳು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಶಿಸ್ತುಬದ್ಧ ಆಡಳಿತ ಮತ್ತು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು. ವಾರ್ತಾ ಇಲಾಖೆಯ ‘ವಾರ್ತಾ ಜನಪರ’ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ನಂತರ ಎಲ್ಲರೂ ಸೇರಿ ಸಾಮೂಹಿಕವಾಗಿ ‘ರಘುಪತಿ ರಾಘವ ರಾಜಾರಾಮ’ ಗೀತೆಯನ್ನು ಹಾಡಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಎಸ್‌ಪಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
