ನಟ ದರ್ಶನ ಅವರನ್ನು ಸದ್ಯಕ್ಕೆ ಭೇಟಿ ಮಾಡುವುದಿಲ್ಲ ಎಂದು ನಟ ಚಿಕ್ಕಣ್ಣ ಸ್ಪಷ್ಟಪಡಿಸಿದ್ದಾರೆ. ತಮ್ಮ ನಾಯಕತ್ವದ ‘ಲಕ್ಷ್ಮೀಪುತ್ರ’ ಸಿನಿಮಾದ ಪ್ರಚಾರಕ್ಕಾಗಿ ಹೊಸಪೇಟೆಗೆ ಆಗಮಿಸಿದ್ದ ವೇಳೆ ಅಪ್ಪು ಪುತ್ಥಳಿಗೆ ನಮನ ಸಲ್ಲಿಸಿ, ಮಾಧ್ಯಮಗಳ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ನಾಯಕ ನಟನಾಗಿ ಅಭಿನಯಿಸಿರುವ ‘ಲಕ್ಷ್ಮೀಪುತ್ರ’ ಸಿನಿಮಾ ಇದೇ ನವೆಂಬರ್ 27ರಂದು ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಪ್ರಚಾರಕ್ಕಾಗಿ ನಟ ಚಿಕ್ಕಣ್ಣ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ಆಗಮಿಸಿದ್ದರು. ಈ ವೇಳೆ ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆಶೀರ್ವಾದ ಪಡೆದ ಅವರು, ಕನ್ನಡದ ಬಹುತೇಕ ಸಿನಿಮಾಗಳ ಬಿಡುಗಡೆಗೂ ಮುನ್ನ ಹೊಸಪೇಟೆಗೆ ಬಂದು ಅಪ್ಪು ಅವರ ಆಶೀರ್ವಾದ ಪಡೆಯುವ ಸಂಪ್ರದಾಯವಿದ್ದು, ತಾವೂ ಕೂಡ ಅಪ್ಪು ಸರ್ ಆಶೀರ್ವಾದ ಪಡೆಯಲು ಬಂದಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಧ್ಯಮದವರು, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದ ಮೇಲೆ ಜೈಲು ಸೇರಿರುವ ನಟ ದರ್ಶನ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ನಟ ಚಿಕ್ಕಣ್ಣ, ಸದ್ಯಕ್ಕೆ ದರ್ಶನ ಅವರನ್ನು ಭೇಟಿ ಮಾಡುವುದಿಲ್ಲ ಎಂದು ನೇರವಾಗಿ ಹೇಳುವ ಮೂಲಕ ಗಮನ ಸೆಳೆದರು.
