baglkote

ಬೇಡಿಕೆ ಈಡೇರಿಸದಿದ್ದರೇ ಮತದಾನಕ್ಕೆ ಬಹಿಷ್ಕಾರ: ಡಿಸೆಂಬರ್ 4 ರಿಂದ ಸುವರ್ಣ ಸೌಧಕ್ಕೆ ‘ಜೈನ ಚಲೋ’ ಪಾದಯಾತ್ರೆ

Share

ಜೈನ ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಹಾಗೂ ರಾಜಕೀಯ ಸ್ಥಾನಮಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಾಗಲಕೋಟೆಯ ತೇರದಾಳದಲ್ಲಿ ನಿರ್ಣಾಯಕ ಮಹಾಮಂಥನ ಸಭೆ ನಡೆಯಿತು. ಅಧಿವೇಶನಕ್ಕೂ ಮುನ್ನ ಸರ್ಕಾರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಡಿಸೆಂಬರ್ 4 ರಿಂದ ಬೆಳಗಾವಿಯ ಸುವರ್ಣ ಸೌಧದವರೆಗೆ ಪ್ರತಿಭಟನಾ ಪಾದಯಾತ್ರೆ ನಡೆಸುವುದಾಗಿ ವರೂರ ಆಚಾರ್ಯಶ್ರೀ 108 ಗುಣಧರ ನಂದಿ ಮಹಾರಾಜರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜೈನ ಸಮಾಜದ ಏಕತೆ, ಅಭಿವೃದ್ಧಿ ಹಾಗೂ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿರುವ ಜೀನಸೇನಾ ಆಚಾರ್ಯ ಗುರುಕುಲದಲ್ಲಿ ಜೈನ ಸಮುದಾಯದ ಬಂಧುಗಳ ಮಹಾಮಂಥನ ಸಭೆ ಜರುಗಿತು. ವರೂರ ಮತ್ತು ಹುಬ್ಬಳ್ಳಿಯ ಆಚಾರ್ಯಶ್ರೀ 108 ಗುಣಧರ ನಂದಿ ಮಹಾರಾಜರ ದಿವ್ಯ ನೇತೃತ್ವದಲ್ಲಿ ನಡೆದ ಈ ಸಭೆಯನ್ನು ಜೈನ ಮುಖಂಡರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಜೈನ ಬಾಂಧವರು ಪಾಲ್ಗೊಂಡು, ಸಮಾಜದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಾನಮಾನಕ್ಕಾಗಿ ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಗಂಭೀರ ಚರ್ಚೆ ನಡೆಸಿದರು.ಪ್ರಮುಖವಾಗಿ ಜೈನ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ, ಜೈನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ಹಾಗೂ ವಿದ್ಯಾರ್ಥಿವೇತನ ಸೌಲಭ್ಯ, ಐತಿಹಾಸಿಕ ಜೈನ ದೇಗುಲಗಳ ಸಂರಕ್ಷಣೆ ಮತ್ತು ಜೈನ ಸಾಧು-ಸಂತರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಲಾಯಿತು. ಬೆಳಗಾವಿ ಚಳಿಗಾಲದ ಅಧಿವೇಶನಕ್ಕೂ ಮುನ್ನ ರಾಜ್ಯ ಸರ್ಕಾರ ಜೈನ ಸಮುದಾಯದ ಈ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು.

ಇದೇ ವೇಳೆ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ ಜೈನಮುನಿ ಗುಣಧರ ನಂದಿ ಮಹಾರಾಜರು, ಒಂದು ವೇಳೆ ಅಧಿವೇಶನಕ್ಕೂ ಮುನ್ನ ಸಮಾಜದ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಡಿಸೆಂಬರ್ 4 ರಿಂದ ಚಿಕ್ಕೋಡಿಯಿಂದ ಬೆಳಗಾವಿಯ ಸುವರ್ಣ ಸೌಧದವರೆಗೆ ಬೃಹತ್ ‘ಜೈನ ಚಲೋ’ ಪ್ರತಿಭಟನಾ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದರು. ಅಲ್ಲದೆ, ಜೈನ ಸಮಾಜಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ನೀಡದ ಹಾಗೂ ಸಮಾಜದ ನೋವಿಗೆ ಸ್ಪಂದಿಸದ ಆಯಾ ಕ್ಷೇತ್ರದ ಶಾಸಕರು ಮತ್ತು ಜನಪ್ರತಿನಿಧಿಗಳಿಗೆ ಮುಂಬರುವ ಚುನಾವಣೆಯಲ್ಲಿ ಮತ ನೀಡಬೇಡಿ ಎಂದು ಶ್ರೀಗಳು ಸಮುದಾಯಕ್ಕೆ ಕರೆ ನೀಡಿದರು.

Tags:

error: Content is protected !!