State

ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಿ: ಸಿ ಎಂ ಡಿ ಕೆ ಶಿವಕುಮಾರ್ ಅಭಿಮುಖ

Share

“ನಾಯಕತ್ವ ಗುಣ ಪ್ರತಿಯೊಂದು ಮಗುವಿನಲ್ಲಿ ಇರುತ್ತದೆ. ಪ್ರತಿಯೊಂದು ಮಗುವು ಉನ್ನತ ಮಟ್ಟಕ್ಕೆ ಬೆಳೆಯುವಂತೆ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ಶಾಸಕರು, ಸಚಿವರ ಮಕ್ಕಳೇ ನಾಯಕರಾಗಿ ಬೆಳೆಯಬೇಕೆಂದೇನಿಲ್ಲ. ಜನಸಾಮಾನ್ಯರ ಮಕ್ಕಳೂ ಬೆಳೆಯಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ನೂತನವಾಗಿ ಆಯ್ಕೆಯಾಗಿರುವ ಪ್ರಾಂಶುಪಾಲರಿಗೆ ನೇಮಕಾತಿ ಆದೇಶ ಪ್ರದಾನ ಮಾಡುವ ಶೈಕ್ಷಣಿಕ ಸಾರಥ್ಯ ಸಮಾರಂಭವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

“ನೂತನ ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿ ಸಮೂಹ ಹಾಗೂ ಸಮಾಜ ವಿಶ್ವಾಸವಿಟ್ಟಿದೆ. ಪ್ರತಿಭೆಗೆ ಅವಕಾಶ, ಪ್ರೋತ್ಸಾಹ ಕೊಡುವುದು ನಮ್ಮ ಕರ್ತವ್ಯ. ಮೈಸೂರು ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಾಗ ಸಚಿವ, ಮುಖ್ಯಮಂತ್ರಿಯಾಗಿದ್ದಕ್ಕಿಂತಲೂ ಹೆಚ್ಚು ಸಂತೋಷವಾಗಿತ್ತು. ವಿದ್ಯೆಯು ಆತ್ಮವಿಶ್ವಾಸ ಬೆಳೆಸುತ್ತದೆ” ಎಂದರು.

ಒಂದು ಪುಸ್ತಕ, ಒಂದು ಲೇಖನಿ, ಒಬ್ಬ ಶಿಕ್ಷಕ ಇಡೀ ದೇಶದ ಭವಿಷ್ಯ ಬದಲಾಯಿಸಬಲ್ಲರು

“ಒಂದು ಪುಸ್ತಕ, ಒಂದು ಲೇಖನಿ, ಒಬ್ಬ ಶಿಕ್ಷಕ ಇಡೀ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲರು. ದೇಶದ ಭವಿಷ್ಯವನನ್ನು ರೂಪಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ನಿಮ್ಮ ಮೇಲೆ ನಮಗೆ ನಂಬಿಕೆ ಇದೆ. ಕೇವಲ ಸ್ವಂತಕ್ಕಾಗಿ ಶಿಕ್ಷಣ ನೀಡಬಾರದು. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶಿಕ್ಷಣ ನೀಡಬೇಕು” ಎಂದು ಹೇಳಿದರು.

“ಸೈನಿಕ, ಕೃಷಿಕ, ಕಾರ್ಮಿಕ, ಶಿಕ್ಷಕ ಸಮಾಜದ ನಾಲ್ಕು ಸ್ತಂಭಗಳು. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ ಕಾರ್ಯಾಂಗ, ಪತ್ರಿಕಾರಂಗ ನಾಲ್ಕು ಸ್ತಂಭಗಳಿದ್ದಂತೆ. ಸರ್ಕಾರ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಅದು ನಮ್ಮ ಸರ್ಕಾರದ ಬದ್ಧತೆ. ಕಾಂಗ್ರೆಸ್ ಸರ್ಕಾರ ಬಂದ ನಂತರ 222 ಜನರಿಗೆ ಪ್ರಾಂಶುಪಾಲರಾಗಿ ಅವಕಾಶಗಳನ್ನು ಕೊಟ್ಟು ಶುಭ ಹಾರೈಸುತ್ತಿದ್ದೇವೆ” ಎಂದರು.

“ಪ್ರಗತಿಯ ಬಗ್ಗೆ ನಮ್ಮದೇ ಆದ ದೂರದೃಷ್ಟಿಯನ್ನು ನಾವು ಹೊಂದಿದ್ದು , ಕಾಲೇಜುಗಳಲ್ಲಿ ನಿಮ್ಮದೇ ನಿಯಂತ್ರಣವಿಟ್ಟುಕೊಂಡು ಚಂಚಲ ಮನಸ್ಸುಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಿಮ್ಮದು. ಸಂಸ್ಥೆ ನಡೆಸುವ ಹೊಣೆ ನಿಮ್ಮ ಮೇಲಿದೆ. ಕಾಲೇಜಿನ ಆಡಳಿತ ಚೆನ್ನಾಗಿ ನಡೆಸಬೇಕು, ಸ್ಪರ್ಧಾತ್ಮಕವಾಗಿ ಕಾಲೇಜನ್ನು ಉತ್ತಮ ಪಡಿಸುವ ಕೆಲಸ ಮಾಡಬೇಕು” ಎಂದು ಕಿವಿಮಾತು ಹೇಳಿದರು.

ಶಿಕ್ಷಣ ಬದುಕು ಬೆಳಗಿಸುವ ಜ್ಯೋತಿ

“ಶಿಕ್ಷಣ ಬದುಕ ಬೆಳಗಿಸುವ ಜ್ಯೋತಿ. ಸಮಾಜವನ್ನು ಬದಲಾಯಿಸುವ ಶಕ್ತಿ. ಪ್ರಾಂಶುಪಾಲರೇ ಸಾರಥಿಗಳು. ಸರ್ಕಾರ ಮತ್ತು ಪೋಷಕರು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಈಗ 5ಜಿ, 6ಜಿ ಯುಗ. ಮಕ್ಕಳೇ ಮೇಷ್ಟ್ರಿಗೆ ಪಾಠ ಹೇಳುವಷ್ಟು ಚುರುಕಾಗಿದ್ದಾರೆ. ಇದರ ಜೊತೆಗೆ ಎಐ ಕೂಡ ಬಂದಿದೆ” ಎಂದರು.

ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ

“ಸರ್ಕಾರಿ ಕಾಲೇಜಿಗೆ ಬರುವ ಮಕ್ಕಳಿಗೆ ಖಾಸಗಿ ಸಂಸ್ಥೆಗಳಿಂದ ಸ್ಪರ್ಧೆಯಿದೆ. ಹೆಣ್ಣುಮಕ್ಕಳೂ ಕೂಡ ವಿದ್ಯಾಭ್ಯಾಸ ಸೇರಿದಂತೆ ಎಲ್ಲಾ ರಂಗದಲ್ಲಿಯೂ ಮುಂದಿದ್ದಾರೆ. ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಪ್ರಾಧ್ಯಾಪಕರು, ಪ್ರಾಂಶುಪಾಲರ ಮೇಲೆ ಹೊಣೆಗಾರಿಕೆ ಹೆಚ್ಚಿದೆ. ಕಾಲೇಜುಗಳಲ್ಲಿ ರ್ರ್ಯಾಗಿಂಗ್ ಮುಕ್ತ ಕ್ಯಾಂಪಸ್ ನಿರ್ಮಾಣ ಮಾಡಿ” ಎಂದು ಕಿವಿಮಾತು ಹೇಳಿದರು.

ಕಾಲೇಜುಗಳಲ್ಲಿ ಯಾವುದೇ ಧರ್ಮ, ಜಾತಿ ,ದ್ವೇಷ , ಭೇದ ಭಾವಗಳಿರಬಾರದು

“ಕಾಲೇಜುಗಳಲ್ಲಿ ಯಾವುದೇ ಧರ್ಮ, ಜಾತಿ ,ದ್ವೇಷ , ಭೇದ ಭಾವನೆಗಳು ಬೆಳೆಯೋದಕ್ಕೆ ಆಸ್ಪದ ನೀಡಬಾರದು. ಈ ಕಾರಣಕ್ಕಾಗಿಯೇ ಕಾಲೇಜು ಚುನಾವಣೆಗಳನ್ನು ನಡೆಸಲು ಸರ್ಕಾರ ನಿರ್ಧರಿಸಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಮಾಜದ ಬಗ್ಗೆ ಅರಿವು ಬೆಳೆಯಲಿದೆ. ನಾವು ಕಾಲೇಜು ಚುನಾವಣೆಗಳಲ್ಲಿ ಸ್ಪರ್ಧಿಸಿಯೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಿದ್ದು” ಎಂದರು.

ಕತ್ತೆಯನ್ನು ಕುದುರೆ ಮಾಡಬೇಕು

“ಈ ಸಮಾಜಕ್ಕೆ ವಿದ್ಯಾವಂತರ ಜೊತೆಗೆ ಪ್ರಜ್ಞಾವಂತರನ್ನು ನೀಡುವ ಜವಾಬ್ದಾರಿ ಶಿಕ್ಷಣ‌ ಸಂಸ್ಥೆಗಳ ಮೇಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಕಾಲೇಜುಗಳೂ ಸಹ ಅತ್ಯುತ್ತಮ ಕೊಡುಗೆ ನೀಡಿವೆ. ಕುದುರೆಯನ್ನು ರೇಸ್ ನಲ್ಲಿ ಓಡುವ ಕುದುರೆ ಮಾಡುವುದು ಮುಖ್ಯವಲ್ಲ. ಕತ್ತೆಯನ್ನು ಕುದುರೆ ಮಾಡುವುದು ಬಹಳ ಮುಖ್ಯ” ಎಂದರು.

ಸಾಕ್ಷಿಗುಡ್ಡೆಗಳನ್ನು ಬಿಟ್ಟುಹೋಗಬೇಕೆಂಬ ಆಶಯ

“ಸಿಎಸ್ ಆರ್ ನಿಧಿ ಬಳಸಿ ಸಚಿವ ಬಾಲಕೃಷ್ಣ ಅವರ ಕ್ಷೇತ್ರದಲ್ಲಿ ಒಂದೊಂದು ಶಾಲೆಗಳನ್ನು 13-14 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ 400-500 ಇದ್ದ ವಿದ್ಯಾರ್ಥಿಗಳ ಸಂಖ್ಯೆ 2 ಸಾವಿರಕ್ಕೇರಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 30 ಶಾಲೆಗಳನ್ನು ದತ್ತು ಪಡೆದುಕೊಳ್ಳಲಾಗಿದೆ. ರಾಜ್ಯದ ಪಂಚಾಯತಿ ಮಟ್ಟದಲ್ಲಿ 2,000 ಶಾಲೆಗಳನ್ನು ದತ್ತು ಪಡೆಯಲಾಗುವುದು. ಹಳ್ಳಿಯಲ್ಲಿಯೇ ಉತ್ತಮ ಅವಕಾಶ ಸಿಗಬೇಕೆಂದ ದೃಷ್ಟಿಯಿಂದ ನನ್ನ ಅವಧಿಯಲ್ಲಿ ಪ್ರಯತ್ನ ಮಾಡುತ್ತಿದ್ದೇನೆ. ನನಗೂ ಸಾಕ್ಷಿಗುಡ್ಡೆಗಳನ್ನು ಬಿಟ್ಟುಹೋಗಬೇಕೆಂಬ ಆಶಯವಿದೆ“ ಎಂದರು.

“ವಿಶ್ವದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಬೆಂಗಳೂರಿನಲ್ಲಿ ಶಾಖೆಗಳನ್ನು ತೆರೆಯುತ್ತಿದ್ದಾರೆ. ಹಾಗಾಗಿ ದೊಡ್ಡ ಮಟ್ಟದ ಸ್ಪರ್ಧೆಯೂ ಇದೆ. ಸರ್ಕಾರಿ ಸಂಸ್ಥೆಗಳನ್ನು ನಡೆಸುವುದು ಕಷ್ಟವಿದೆ. ಆದರೂ ಇದ್ದುದ್ದರಲ್ಲಿಯೇ ಉತ್ತಮ ಸೌಕರ್ಯ ನೀಡಬೇಕು. ವಿಶ್ವ ಬ್ಯಾಂಕಿನ ನೆರವು ತಂದು ತಾಂತ್ರಿಕ, ಉನ್ನತ, ಶಿಕ್ಷಣದಲ್ಲಿ ಉತ್ತಮ ಬದಲಾವಣೆಗಳನ್ನು ತರಬೇಕೆಂಬ ದೃಷ್ಟಿಯಿಂದ ಸಚಿವ ಬಸವರಾಜ ರಾಯರೆಡ್ಡಿಯವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿದ್ದು ಬದ್ಧತೆಯುಳ್ಳ ವ್ಯಕ್ತಿ ಎಂಬ ಕಾರಣಕ್ಕೆ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ’ ಎಂದರು.

ಶಿಕ್ಷಕರು ರಾಷ್ಟ್ರ ನಿರ್ಮಾತೃಗಳು

“ವಿಶ್ವದ ಎಲ್ಲರೂ ಬೆಂಗಳೂರಿನತ್ತ ನೋಡುತ್ತಿದ್ದಾರೆ. ಭಾರತ ಬೆಂಗಳೂರಿನ ಮುಖಾಂತರವೇ ಬೆಳೆಯುತ್ತಿದೆ. ಶಿಕ್ಷಕರು ರಾಷ್ಟ್ರದ ನಿರ್ಮಾತೃಗಳು. ನಮ್ಮ ಮೇಲೆ ನೀವು ವಿಶ್ವಾಸವಿಡಬೇಕು. ಸರ್ಕಾರವನ್ನು ಉಳಿಸಿಕೊಳ್ಳುವುದರಲ್ಲಿಯೂ ನಿಮ್ಮ ಪಾತ್ರವಿದೆ. ಶಿಸ್ತಿನಿಂದ ಕಾರ್ಯನಿರ್ವಹಿಸಿದರೆ, ಪ್ರಾಮಾಣಿಕತೆಯಿಂದ ನಿಮ್ಮನ್ನು ಗುರುತಿಸುವ ಕೆಲಸ ನಾವು ಮಾಡುತ್ತೇವೆ.‌ ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡ ನಿಮ್ಮ ಆಸಕ್ತಿ ಮೆಚ್ಚತಕ್ಕದ್ದು. ನಾವೆಲ್ಲರೂ ಸೇರಿ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸಲು ಒಟ್ಟಾಗಿ ಕೆಲಸ ಮಾಡೋಣ” ಎಂದು ಹೇಳಿದರು.

Tags:

error: Content is protected !!