baglkote

ಕಬ್ಬು ದರ ಸಂಘರ್ಷಕ್ಕೆ ತೆರೆ ಬಿದ್ದರೂ ನಿಲ್ಲದ ಕ್ರೆಡಿಟ್ ವಾರ್…

Share

ಬಾಗಲಕೋಟೆ ಜಿಲ್ಲೆಯ ಮುಧೋಳ ರೈತರ ನಿರಂತರ ಹೋರಾಟಕ್ಕೆ ಕಡೆಗೂ ಭರ್ಜರಿ ಜಯ ಸಿಕ್ಕಿದ್ದು, ಪ್ರತಿ ಟನ್ ಕಬ್ಬಿಗೆ 3800 ರೂಪಾಯಿ ದರ ನಿಗದಿಯಾಗಿದೆ. ಆದರೆ, ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಈಗ ಬೆಳಗಾವಿ ಮತ್ತು ಬಾಗಲಕೋಟೆ ರೈತ ಬಣಗಳ ನಡುವೆ ಕ್ರೆಡಿಟ್ ವಾರ್ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎರಡೂ ಜಿಲ್ಲೆಯ ರೈತ ಮುಖಂಡರು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿರುವ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ.

ಕಬ್ಬು ಬೆಲೆ ನಿಗದಿಗಾಗಿ ಮುಧೋಳ ರೈತರು ನಡೆಸಿದ ತೀವ್ರ ಹೋರಾಟಕ್ಕೆ ಮಣಿದ ಕಾರ್ಖಾನೆಗಳು ಪ್ರತಿ ಟನ್‌ಗೆ 3800 ರೂಪಾಯಿ ದರ ನೀಡಲು ಒಪ್ಪಿಕೊಂಡಿವೆ. ವಿಶೇಷವೆಂದರೆ, ಬೆಳಗಾವಿ ಭಾಗದ ಹೋರಾಟಗಾರರು ಪಡೆದ ದರಕ್ಕಿಂತ ಮುಧೋಳ ರೈತರು 200 ರೂಪಾಯಿ ಹೆಚ್ಚು ದರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಬ್ಬು ಸಂಘರ್ಷಕ್ಕೆ ತಾತ್ಕಾಲಿಕ ತೆರೆ ಬೀಳುತ್ತಿದ್ದಂತೆ ಸಂಭ್ರಮಿಸುತ್ತಿರುವ ಮುಧೋಳ ರೈತರು, ಸಾಮಾಜಿಕ ಜಾಲತಾಣಗಳಲ್ಲಿ ‘ಮುಧೋಳದ ಗತ್ತು ದೇಶಕ್ಕೇ ಗೊತ್ತು’ ಎಂದು ಪೋಸ್ಟ್‌ಗಳನ್ನು ಹಾಕುವ ಮೂಲಕ ತಮ್ಮ ಹೋರಾಟದ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ.


ಮತ್ತೊಂದೆಡೆ, ಮುಧೋಳ ರೈತರ ಈ ಗೆಲುವಿನ ಶ್ರೇಯಸ್ಸಿನ ವಿಚಾರವಾಗಿ ಬೆಳಗಾವಿ ಮತ್ತು ಬಾಗಲಕೋಟೆ ರೈತ ಮುಖಂಡರ ನಡುವೆ ತೀವ್ರ ವಾಕ್ಸಮರ ಭುಗಿಲೆದ್ದಿದೆ. ಮುಧೋಳ ಹೋರಾಟ ಯಶಸ್ವಿಯಾಗಲು ನಮ್ಮ ಹೋರಾಟವೇ ಕಾರಣ ಎಂದು ಬೆಳಗಾವಿ ರೈತ ಮುಖಂಡರು ಹೇಳಿಕೊಳ್ಳುತ್ತಿರುವುದು ಬಾಗಲಕೋಟೆ ರೈತರ ಕಣ್ಣು ಕೆಂಪಾಗಿಸಿದೆ. ಇದೇ ವಿಚಾರವಾಗಿ ಬೆಳಗಾವಿಯ ರೈತ ಮುಖಂಡರಾದ ಚುನ್ನಪ್ಪ ಪೂಜಾರಿ ಹಾಗೂ ಶಶಿಕಾಂತ ಗುರೂಜಿ ವಿರುದ್ಧ ಬಾಗಲಕೋಟೆ ರೈತರು ತೀವ್ರ ಅಸಮಾಧಾನ ಹೊರಹಾಕಿದ್ದು, ಸದ್ಯ ಉಭಯ ಬಣಗಳ ನಡುವಿನ ವಾಕ್‌ ವಾರ್ ವಿಡಿಯೋಗಳು ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.

Tags:

error: Content is protected !!