ಬೆಳಗಾವಿಯಲ್ಲಿ ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳನ್ನು ವ್ಯವಸ್ಥಿತವಾಗಿ ಕೈಬಿಡಲು ನಮೂನೆ-7 ರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಕುರಿತು ಕಾಂಗ್ರೆಸ್ ಕಾರ್ಯಕರ್ತ ಅಮಾನ್ ಸೇಠ್ ಅವರು ಮುಖ್ಯಮಂತ್ರಿಗೆ ದೂರು ನೀಡಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಬೆಳಗಾವಿಯಲ್ಲಿ ಕರಡು ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರು, ಒಬಿಸಿ ಹಾಗೂ ಎಸ್ಸಿ-ಎಸ್ಟಿ ಸಮುದಾಯದ ಅರ್ಹ ಮತದಾರರ ಹೆಸರುಗಳನ್ನು ಸಾಮೂಹಿಕವಾಗಿ ತೆಗೆದುಹಾಕಲು ನಮೂನೆ-7 ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ. ಡಾ. ರವಿ ಪಾಟೀಲ್ ಹಾಗೂ ಅವರ ಸಿಬ್ಬಂದಿ ಸೇರಿದಂತೆ ಕೆಲವರು ನೂರಾರು ಅರ್ಜಿಗಳನ್ನು ಸಲ್ಲಿಸಿ ಮತದಾರರ ಹಕ್ಕುಗಳನ್ನು ಕಸಿಯಲು ಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತ ಅಮಾನ್ ಸೇಠ್ ಅವರು ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದಾರೆ.
ಕೇವಲ ಅಲ್ಪಸಂಖ್ಯಾತರು, ಎಸ್ಸಿ, ಎಸ್ಟಿ, ಒಬಿಸಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ತನ್ವೀರ್ ಸೇಠ್ ಕ್ಷೇತ್ರದಲ್ಲಿ 10,000 ಫಾರ್ಮ್-7 ಅರ್ಜಿ ಹಾಕಲಾಗಿದೆ. ಕರ್ನಾಟಕದಲ್ಲಿ ಸುಮಾರು 50-60 ಲಕ್ಷ ಮತದಾರರನ್ನು ಕೈಬಿಡಲು ಬಿಜೆಪಿ, ಜೆಡಿಎಸ್ ನಾಯಕರು ಷಡ್ಯಂತ್ರ ನಡೆಸಿದ್ದಾರೆ. ಫಾರ್ಮ್-7ರಲ್ಲಿ ಮತದಾರರ ಹೆಸರು, ವಿಳಾಸ, ಎಪಿಕ್ ಸಂಖ್ಯೆ, ಸೇರಿ ಸಂಪೂರ್ಣ ಮಾಹಿತಿ ಇರುವ ಮುದ್ರಿತ ಅರ್ಜಿಗಳನ್ನು ಸಲ್ಲಿಸಲಾಗಿದೆ. ಒಂದೊಂದು ವಿಧಾನಸಭಾ ಕ್ಷೇತ್ರಗಳಲ್ಲಿ 5 ಸಾವಿರದಿಂದ 10 ಸಾವಿರ ಫಾರ್ಮ್-7 ಮೂಲಕ ಅರ್ಜಿ ಸಲ್ಲಿಕೆಯಾಗಿವೆ. ಮತ ಡಿಲೀಟ್ ಮಾಡಲು ಬಿಜೆಪಿಯ ಒಬ್ಬೊಬ್ಬ ಕಾರ್ಯಕರ್ತರು 80, 90, 150, 200 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಸಿಎಂ ದೂರಿದರು.
ಈ ಷಡ್ಯಂತ್ರದ ಹಿಂದೆ ಇರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು, ತನಿಖೆಗೆ ಆದೇಶಿಸಬೇಕು. ಅಲ್ಲಿಯವರೆಗೂ ಚುನಾವಣಾ ಆಯೋಗದ ಕಚೇರಿಯಿಂದ ನಾವು ಹೊರಬರುವುದಿಲ್ಲ. ಇಂದು ಸಚಿವ ಸಂಪುಟ ಸಭೆ ಇದೆಯಾದರೂ ನಮಗೆ ಮತದಾರರ ಹಕ್ಕು ರಕ್ಷಣೆ ಪ್ರಮುಖ ಆದ್ಯತೆಯಾಗಿದೆ. ಚುನಾವಣೆ ಗೆಲ್ಲಲಾಗದೆ, ಚುನಾವಣಾ ಆಯೋಗ, ಎಸ್ಐಆರ್ ಮೂಲಕ ಅಕ್ರಮಕ್ಕೆ ಮುಂದಾಗಿದ್ದಾರೆ. ಕಾನೂನು ಪ್ರಕಾರ ಏನು ಮಾಡಬಹುದು ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಎಫ್ಐಆರ್ ದಾಖಲಿಸಲಾಗುತ್ತಿದೆ. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ. ಕೂಡಲೇ ಎಫ್ಐಆರ್ ದಾಖಲಿಸಲು ಸೂಚನೆ ನೀಡಲಾಗಿದ್ದು, ಸಮಗ್ರ ತನಿಖೆ ನಡೆಸಬೇಕಾಗಿದೆ ಎಂದು ಆಗ್ರಹಿಸಿದರು.
