: ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಾಳಿಪಟದ ಮಾರಕ ಮಾಂಜಾ ದಾರ ಕೊರಳಿಗೆ ಸಿಲುಕಿ ಭೀಕರ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ಗೆ ಅಪ್ಪಳಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗಾಂಧಿನಗರದ ಬಳಿ ನಡೆದಿದೆ.

ಬೆಳಗಾವಿ ಮಹಾಂತೇಶ ನಗರದ ನಿವಾಸಿ ಧ್ರುವ ಕರ್ಜಗಿ (19) ಮೃತಪಟ್ಟ ದುರ್ದೈವಿಯಾಗಿದ್ದು, ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಬಳಿ ಗುರುವಾರ ಈ ಅಪಘಾತ ಸಂಭವಿಸಿದೆ. ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಅನಿರೀಕ್ಷಿತವಾಗಿ ಗಾಳಿಪಟದ ಮಾಂಜಾ ದಾರ ಯುವಕನ ಕೊರಳಿಗೆ ಸಿಲುಕಿದೆ. ಇದರಿಂದ ಏಕಾಏಕಿ ವಾಹನದ ಮೇಲಿನ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನವು ರಸ್ತೆ ಮಧ್ಯೆ ಇದ್ದ ಡಿವೈಡರ್ಗೆ ಜೋರಾಗಿ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಮೇಲೆಯೇ ಯುವಕ ಪ್ರಾಣಬಿಟ್ಟಿದ್ದು, ಸ್ಥಳದಲ್ಲೇ ದಾರುಣ ಸಾವು ಸಂಭವಿಸಿದೆ. ಈ ಕುರಿತು ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
