ಇಲ್ಲಿನ ಕೆ. ಎಲ್. ಇ. ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ (ಬಿ. ಕೆ. ಕಾಲೇಜು) ಸಮಾಜವಿಜ್ಞಾನ, ಭಾಷಾವಿಜ್ಞಾನ ಹಾಗೂ ಪತ್ರಿಕೋದ್ಯಮ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಮುಂಬರುವ ಅಕ್ಟೋಬರ್ ೫ ರ ಸೋಮವಾರದಂದು ‘ಬಸವೇಶ್ವರರ ವಿಚಾರ ದೃಷ್ಟಿಕೋನಗಳು’ ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಮಟ್ಟದ ವಿದ್ಯಾರ್ಥಿ ವಿಚಾರಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸುಧೀರ ಎಸ್. ಕೋಠಿವಾಲೆ ತಿಳಿಸಿದರು.

ಕಾಲೇಜಿನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸೋಮವಾರ ಬೆಳಿಗ್ಗೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕೆ. ಎಲ್. ಇ. ಸಂಸ್ಥೆಯ ನಿರ್ದೇಶಕರು ಹಾಗೂ ಮಾಜಿ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ವಹಿಸಲಿದ್ದಾರೆ. ಬಿ. ಕೆ. ಕಾಲೇಜಿನ ಸ್ಥಳೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರು ಹಾಗೂ ಸಂಸ್ಥೆಯ ನಿರ್ದೇಶಕರಾದ ಬಸವರಾಜ ಆರ್. ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಅಶೋಕ ಎಸ್. ಆಲೂರ ಆಗಮಿಸಲಿದ್ದು, ಸ್ಥಳೀಯ ನಿರ್ದೇಶಕರಾದ ಎಸ್. ಎಸ್. ಚೆನ್ನನವರ, ಎನ್. ಎಸ್. ವಂಟಮುತ್ತೆ, ಸುಭಾಷ ಕವಲಾಪುರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ವಿಚಾರಸಂಕಿರಣದಲ್ಲಿ ಮಹಾತ್ಮ ಬಸವೇಶ್ವರರ ಸಾಮಾಜಿಕ, ರಾಜಕೀಯ, ಆರ್ಥಿಕ, ಮಾಧ್ಯಮ ಹಾಗೂ ಸಾಹಿತ್ಯಿಕ ಸೇರಿದಂತೆ ಒಟ್ಟು ೮ ಪ್ರಮುಖ ವಿಷಯಗಳ ಕುರಿತು ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧ ಮಂಡಿಸಲಿದ್ದಾರೆ. ಕರ್ನಾಟಕದ ವಿವಿಧ ಭಾಗಗಳಾದ ಬೆಂಗಳೂರು, ಅಥಣಿ, ವಿಜಯಪುರ ಹಾಗೂ ನೆರೆಯ ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಿಂದ ಒಟ್ಟು ೩೧೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಪತ್ರಿಕೋದ್ಯಮ (೫೦), ರಾಜ್ಯಶಾಸ್ತ್ರ (೬೦), ಅರ್ಥಶಾಸ್ತ್ರ (೩೫), ಕನ್ನಡ (೬೦), ಇಂಗ್ಲಿಷ್ (೩೫) ಮತ್ತು ಹಿಂದಿ (೨೫) ವಿಷಯಗಳಡಿಯಲ್ಲಿ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಪ್ರಬಂಧ ಮೌಲ್ಯಮಾಪನಕ್ಕಾಗಿ ವಿವಿಧ ಕಾಲೇಜುಗಳ ಹಿರಿಯ ಪ್ರಾಧ್ಯಾಪಕರನ್ನು ತೀರ್ಪುಗಾರರನ್ನಾಗಿ ಆಹ್ವಾನಿಸಲಾಗಿದೆ.
ಅಂದು ಸಂಜೆ ೩:೩೦ಕ್ಕೆ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭ ನಡೆಯಲಿದ್ದು, ಚಿಂಚಣಿ ಮಠದ ಶ್ರೀ ಶಿವಪ್ರಸಾದ ದೇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಎಂ. ಟಿ. ಕುರಣಿ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಡಾ. ಬಿ. ಎಮ್. ಪಾಟೀಲ, ಡಾ. ಜಿ. ದೊಡ್ಡಮನಿ, ಡಾ. ಎಸ್. ಎಸ್. ಮಾದರ, ಡಾ. ಸಿದ್ಧಲಿಂಗ ಮಟ್ಟನವರ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ. ಬಿ. ಜಿ. ಕುಲಕರ್ಣಿ, ಸದಾಶಿವ ಕೆ. ಹಾದಿಮನಿ, ಪ್ರೊ. ಜೆ. ಎಸ್. ಬಾರಂಗಿ, ಕಾಲೇಜಿನ ಸಿಬ್ಬಂದಿ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
