ಶಮನೇವಾಡಿಯ ಎ.ಜಿ.ಎಮ್. ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರಸಂತ ಆಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರ 53 ನೇ ವರ್ಷದ ಜನ್ಮದಿನೋತ್ಸವದ ಅಂಗವಾಗಿ ಬೆಡಕಿಹಾಳದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸನಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬೆಡಕಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಜ್ಞಾ ನಾರಾಯಣ ಬಡಿಗೇರ, “ಇಂದಿನ ಯುವಜನತೆ ಪೋಷಕಾಂಶಗಳಿಲ್ಲದ ಫಾಸ್ಟ್ ಫುಡ್ ಸಂಸ್ಕೃತಿಗೆ ಹೆಚ್ಚು ಮಾರುಹೋಗುತ್ತಿದ್ದಾರೆ. ಆರೋಗ್ಯಕರ ಜೀವನಕ್ಕೆ ಪೌಷ್ಟಿಕ ಆಹಾರ, ದಿನನಿತ್ಯದ ವ್ಯಾಯಾಮ ಮತ್ತು ಸರಿಯಾದ ನಿದ್ರೆ ಅತ್ಯಗತ್ಯ. ಮಾನಸಿಕ ಒತ್ತಡದಿಂದ ದೂರವಿದ್ದು, ಉತ್ತಮ ಮನಸ್ಥಿತಿಯನ್ನು ಕಾಯ್ದುಕೊಳ್ಳಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕಿ ಭಾಗ್ಯಶ್ರೀ ಅಲಗೂರೆ ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ಯುವಕರು ಮೊಬೈಲ್ ಬಳಕೆಗೆ ದಾಸರಾಗಿದ್ದು, ಸ್ಕ್ರೀನ್ ಟೈಮ್ ಹೆಚ್ಚಾದಂತೆ ಮನೋ-ಶಾರೀರಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಪ್ರತಿಯೊಬ್ಬರೂ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡು ಆರೋಗ್ಯವಂತರಾಗಿ ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಬೇಕು” ಎಂದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಸಂಜಯ ಅಂಕಲಿ ಮಾತನಾಡಿ, “ಯುವಕರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿದ್ದರೆ ಮಾತ್ರ ಕುಟುಂಬ, ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಈ ಶಿಬಿರದಲ್ಲಿ ಕಾಲೇಜಿನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಪ್ರಯೋಜನ ಪಡೆದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಥಮ ವರ್ಷದ ಸಂಯೋಜಕ ಡಾ. ಸಚಿನ್ ಮೆಕ್ಕಳಕಿ ಸ್ವಾಗತಿಸಿದರು. ಪ್ರಶಾಂತ್ ಶೇಡಬಾಳಕರ್ ಅತಿಥಿಗಳನ್ನು ಪರಿಚಯಿಸಿದರೆ, ಅಶ್ವಿನಿ ಫರಲಾದ ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಜೂನಿಯರ್ ಲ್ಯಾಬ್ ಟೆಕ್ನಿಕಲ್ ಆಫೀಸರ್ ಸಂಜೀವಕುಮಾರ್ ಕುಲಕರ್ಣಿ, ಶೋಭಾ ಎಲ್. ಕೊಳವಿ, ಆಶಾ ಕಾರ್ಯಕರ್ತೆಯರಾದ ಮಂಜುಳಾ ಅರಗೆ, ಉಜ್ವಲಾ ಕುರಾಡೆ ಸೇರಿದಂತೆ ಕಾಲೇಜಿನ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರಾದ ಡಾ. ಶಶಿಕಾಂತ ವಾಳಕೆ, ಕೆ. ಆರ್. ಪಾಟೀಲ, ಸಾಗರ ಬಿರಡೆ, ಉಲ್ಲಾಸ ಮಹಿಶಾಳೆ, ಸ್ನೇಹಾ ವಾಳಕಿ, ವೈಷ್ಣವ ಶೆಗಳೆ, ಅಶ್ವಿನಿ ಮೊನಾಚಾರ್ಯ, ರಾಣಿ ಸುಟುರೆ, ರವಿ ವಾಳಕೆ, ಮುತ್ತಣ್ಣಾ ಗೊಳಪ್ಪಗೋಳ, ಪಿರಗೌಡಾ ಹುಳಿಕೊಪ್ಪೆ, ಕೈಫ್ ಮುಲ್ಲಾ, ಶ್ವೇತಾ ಹವಾಲ್ದಾರ, ಸ್ವಯಂ ಶ್ಯಾಮ್, ಕಾಡೇಶ ಕಲಾದಗಿ, ಜ್ಞಾನೇಶ್ವರ ನಾಯಿಕ, ಸುಪ್ರಿಯಾ ಗೊಳಪ್ಪಗೋಳ, ಮಾಧುರಿ ಬೊರಗಾಂವೆ, ಅರುಣಾ ಮಾಳಗೆ, ಪ್ರತಿಭಾ ಖೋತ, ಚೈತ್ರಾ ವಡ್ಡರ ಹಾಗೂ ಇತರರು ಉಪಸ್ಥಿತರಿದ್ದರು.
