ಅಕ್ರಮ ಆಸ್ತಿ ಗಳಿಕೆ ದೂರಿನ ಹಿನ್ನೆಲೆಯಲ್ಲಿ ನಿಪ್ಪಾಣಿ ತಹಶೀಲ್ದಾರ್ ಸುರೇಶ ಮುಂಜೆ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳಗಿನ ಜಾವವೇ ಶಾಕ್ ನೀಡಿದ್ದಾರೆ. ತಹಶೀಲ್ದಾರ್ಗೆ ಸೇರಿದ ಮನೆ, ಕಚೇರಿ ಸೇರಿದಂತೆ ವಿವಿಧ ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿ, ತೀವ್ರ ಪರಿಶೀಲನೆ ಕೈಗೊಂಡಿದೆ.

ಬೆಳಗಾವಿ ಲೋಕಾಯುಕ್ತ ಎಸ್ಪಿ ಪ್ರಸನ್ನ ದೇಸಾಯಿ ಅವರ ನೇತೃತ್ವದಲ್ಲಿ ಕಣಕ್ಕಿಳಿದ ಅಧಿಕಾರಿಗಳ ತಂಡ, ನಿಪ್ಪಾಣಿ, ಅಥಣಿ ಹಾಗೂ ಮೂಡಲಗಿ ಸೇರಿದಂತೆ ವಿವಿಧೆಡೆ ವಿಸ್ತಾರವಾದ ಶೋಧ ಕಾರ್ಯ ನಡೆಸಿದೆ. ನಿಪ್ಪಾಣಿಯಲ್ಲಿರುವ ತಹಶೀಲ್ದಾರ್ ಕಚೇರಿ ಮತ್ತು ನಿವಾಸದ ಜೊತೆಗೆ, ಮೂಡಲಗಿಯಲ್ಲಿರುವ ಸುರೇಶ ಮುಂಜೆ ಅವರ ಪತ್ನಿಯ ಮನೆ ಮೇಲೂ ಲೋಕಾಯುಕ್ತ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಸಾರ್ವಜನಿಕರಿಂದ ಬಂದಿದ್ದ ಅಕ್ರಮ ಆಸ್ತಿ ಗಳಿಕೆ ದೂರಿನ ಮೇರೆಗೆ ಈ ದಾಳಿ ನಡೆದಿದ್ದು, ದಾಳಿ ವೇಳೆ ಅಧಿಕಾರಿಗಳು ಹಲವು ಪ್ರಮುಖ ಕಡತಗಳು, ಆಸ್ತಿಪತ್ರಗಳು, ಬ್ಯಾಂಕ್ ಪಾಸ್ಬುಕ್ಗಳು ಹಾಗೂ ನಗದು-ಆಭರಣಗಳ ಮಾಹಿತಿಯನ್ನು ವಶಕ್ಕೆ ಪಡೆದು ತನಿಖೆ ಒಳಪಡಿಸಿದ್ದಾರೆ.
ಸದ್ಯ ಬೆಳಗಾವಿ ಲೋಕಾಯುಕ್ತ ಎಸ್ಪಿ ಪ್ರಸನ್ನ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳ ತಂಡ ಶೋಧ ಕಾರ್ಯವನ್ನು ಮುಂದುವರಿಸಿದ್ದು, ಪರಿಶೀಲನೆ ಪೂರ್ಣಗೊಂಡ ಬಳಿಕ ಜಪ್ತಿಯಾದ ಆಸ್ತಿಯ ಅಧಿಕೃತ ಮೌಲ್ಯ ಮತ್ತು ಹೆಚ್ಚಿನ ವಿವರಗಳು ಹೊರಬರಬೇಕಿದೆ.
