Chikkodi

ರೈತರಿಗೆ ೬ ಗಂಟೆ ನಿರಂತರ ವಿದ್ಯುತ್ ಪೂರೈಕೆ, ಸಬ್‌ಸ್ಟೇಷನ್‌ಗಳ ಮೇಲ್ದರ್ಜೆಗೆ ಕ್ರಮ: ಶಾಸಕ ಗಣೇಶ ಹುಕ್ಕೇರಿ ಭರವಸೆ

Share

ಚಿಕ್ಕೋಡಿ:ಪ್ರಸ್ತುತ ಆವರಿಸಿರುವ ಬರ ಪರಿಸ್ಥಿತಿಯ ನಡುವೆಯೂ ರೈತರು ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ವಿದ್ಯುತ್ ಅಭಾವ ಎದುರಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ತಿಳಿಸಿದ್ದಾರೆ.

ಚಿಕ್ಕೋಡಿಯ ಹೆಸ್ಕಾಂ ಕಚೇರಿಯ ಸಭಾಂಗಣದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ, ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಬರಗಾಲದಿಂದಾಗಿ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ರೈತರಿಗೆ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ೬ ಗಂಟೆಗಳ ಕಾಲ ವಿದ್ಯುತ್ ಪೂರೈಸಲು ಹೆಸ್ಕಾಂ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಿಗೆ ಹೋಲಿಸಿದರೆ ಕೃಷ್ಣಾ ನದಿ ಪಾತ್ರದ ಚಿಕ್ಕೋಡಿ ಭಾಗದಲ್ಲಿ ಕಬ್ಬಿನ ಕಾರ್ಖಾನೆಗಳು ಮತ್ತು ನೀರಾವರಿ ಜಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆದ್ದರಿಂದ ಈ ಪ್ರದೇಶಕ್ಕೆ ಹೆಚ್ಚಿನ ವಿದ್ಯುತ್ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿ ಮುಂದಿನ ವಾರ ಮುಖ್ಯಮಂತ್ರಿಗಳು ಹಾಗೂ ಇಂಧನ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ವಿದ್ಯುತ್ ಮೂಲಸೌಕರ್ಯ ಅಭಿವೃದ್ಧಿ ಕುರಿತು ಮಾಹಿತಿ ನೀಡಿದ ಶಾಸಕರು, ಕೇರೂರ ಸಬ್‌ಸ್ಟೇಷನ್ ಅನ್ನು ೩೩ ಕೆವಿ ಯಿಂದ ೧೧೦ ಕೆವಿಗೆ ಮೇಲ್ದರ್ಜೆಗೇರಿಸಲಾಗಿದೆ. ಪಟ್ಟಣಕುಡಿಯಲ್ಲೂ ೫ ಎಕರೆ ಜಮೀನು ಮಂಜೂರು ಮಾಡಿ ೧೧೦ ಕೆವಿ ಸಬ್‌ಸ್ಟೇಷನ್ ನಿರ್ಮಿಸಲಾಗಿದೆ. ಅಲ್ಲದೆ ಹಿರೇಕುಡಿ ಹಾಗೂ ಶಿರಗಾಂವ್ ಭಾಗಗಳಲ್ಲೂ ಹೊಸ ಸಬ್‌ಸ್ಟೇಷನ್ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ೨-೩ ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಕ್ಷೇತ್ರದಲ್ಲಿ ಟ್ರಾನ್ಸ್‌ಫಾರ್ಮರ್ ಕೊರತೆ ಹಾಗೂ ತಾಂತ್ರಿಕ ದೋಷಗಳು ಉಂಟಾಗದಂತೆ ನಿರಂತರ ನಿಗಾ ವಹಿಸಲಾಗಿದೆ. ಯಾವುದೇ ಬ್ಯಾಕ್‌ಲಾಗ್ ಉಳಿಸಿಕೊಳ್ಳದೆ ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ ಟ್ರಾನ್ಸ್‌ಫಾರ್ಮರ್‌ಗಳು ಕೆಟ್ಟುಹೋದರೆ, ವಾಹನಗಳ ಮೂಲಕ ನೇರವಾಗಿ ರೈತರ ಮನೆಬಾಗಿಲಿಗೆ ಶೀಘ್ರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

 

ಸಭೆಯಲ್ಲಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಸುಪ್ರಭಾ ಬಂಡಗರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸಂಜೀವ ಕುಮಾರ ಸುಖಸಾಗರೆ, ಬಸವರಾಜ ಪೂಜಾರಿ, ನಿಖಿಲ ದುಕ್ಕಾನಿ ಸೇರಿದಂತೆ ವಿವಿಧ ಶಾಖಾಧಿಕಾರಿಗಳು ಹಾಗೂ ಹೆಸ್ಕಾಂ ಸಿಬ್ಬಂದಿ ಉಪಸ್ಥಿತರಿದ್ದರು.

Tags:

error: Content is protected !!