BELAGAVI

ನಿಲವಡೆ ಅರಣ್ಯ ಇಲಾಖೆಯಿಂದ ರೈತರಿಗೆ ವಿಶೇಷ ಮಾರ್ಗದರ್ಶನ

Share

ಖಾನಾಪುರ: ತಾಲ್ಲೂಕಿನ ನಿಲವಡೆ ಗ್ರಾಮದಲ್ಲಿ ಅರಣ್ಯ ಇಲಾಖೆ ವತಿಯಿಂದ ರೈತರಿಗೆ ವನ್ಯಜೀವಿ ಹಾವಳಿ ತಡೆಗಟ್ಟುವ ಕುರಿತು ಪ್ರಮುಖ ಮಾರ್ಗದರ್ಶನ ಸಭೆ ಜರುಗಿತು. ಕಾಡುಪ್ರಾಣಿಗಳಿಂದ ಬೆಳೆ ಹಾಗೂ ಜೀವ ರಕ್ಷಣೆಗಾಗಿ ಸರಕಾರದ ವತಿಯಿಂದ ಅಗತ್ಯ ಪರಿಹಾರ ಹಾಗೂ ಸೂಕ್ತ ಕ್ರಮಕೈಗೊಳ್ಳುವುದಾಗಿ ಆರ್‌ಎಫ್‌ಒ ತೇಜ್ ವೈ.ಪಿ. ಭರವಸೆ ನೀಡಿದರು.

ಖಾನಾಪುರ ತಾಲ್ಲೂಕಿನ ನಿಲವಡೆ ಗ್ರಾಮದ ಲಿಂಗದೇವ ಮಂದಿರದಲ್ಲಿ ನಡೆದ ಸಭೆಯಲ್ಲಿ ಆರ್‌ಎಫ್‌ಒ ತೇಜ್ ವೈ.ಪಿ. ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡು ರೈತರ ಸಮಸ್ಯೆಗಳನ್ನು ಆಲಿಸಿದರು. ಆನೆ, ಕಾಡುಕೋಣ, ಕಾಡುಹಂದಿ ಹಾಗೂ ಚಿರತೆಯಂತಹ ಹಿಂಸ್ರ ಪ್ರಾಣಿಗಳಿಂದ ರೈತರ ಕಬ್ಬು ಸೇರಿದಂತೆ ಬೆಳೆಗಳು ಹಾನಿಯಾಗುತ್ತಿದ್ದು, ರೈತರ ಪ್ರಾಣಕ್ಕೂ ಅಪಾಯ ಎದುರಾಗಿದೆ ಎಂದು ಸ್ಥಳೀಯ ಮುಖಂಡರು ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಆರ್‌ಎಫ್‌ಒ ತೇಜ್ ವೈ.ಪಿ., ರೈತರ ಜಮೀನುಗಳಿಗೆ ಪ್ರಾಣಿಗಳು ನುಗ್ಗದಂತೆ ತಡೆಯಲು ಸೋಲಾರ್ ಬೇಲಿ ಅಳವಡಿಕೆಗೆ ಸರಕಾರದಿಂದ ಸಹಾಯಧನ ಕೊಡಿಸುವುದಾಗಿ ತಿಳಿಸಿದರು. ಅಲ್ಲದೆ, ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಒದಗಿಸಲು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಪಿಡಿಒ ಬಲಿರಾಮ್ ದೇಸಾಯಿ ಸ್ವಾಗತಿಸಿ, ವಂದನಾರ್ಪಣೆಗೈದರೆ, ಪ್ರಗತಿಪರ ರೈತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಆರ್‌ಎಫ್‌ಒ ಅವರನ್ನು ಸನ್ಮಾನಿಸಿದರು.

Tags:

error: Content is protected !!