State

ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತ, ದಲಿತರ ಮತ ಕಡಿತಕ್ಕೆ ಸಂಚು

Share

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಕೀಯ ದುರುದ್ದೇಶದಿಂದ ಅಲ್ಪಸಂಖ್ಯಾತ ಹಾಗೂ ದಲಿತರ ಮತಗಳನ್ನು ವ್ಯವಸ್ಥಿತವಾಗಿ ತೆಗೆದುಹಾಕಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ನಾಯಕರ ಸೂಚನೆಯಂತೆ ಫಾರ್ಮ್-7 ಬಳಸಿ ಮತಗಳನ್ನು ಅಳಿಸಲು ಯತ್ನಿಸುತ್ತಿದ್ದು, ಈ ಬಗ್ಗೆ ಕ್ರಿಮಿನಲ್ ತನಿಖೆಯಾಗಬೇಕು ಎಂದು ಆಗ್ರಹಿಸಿರುವ ಅವರು, ನಾಳೆ ಖುದ್ದಾಗಿ ಚುನಾವಣಾ ಆಯೋಗವನ್ನು ಭೇಟಿ ಮಾಡಿ ದಾಖಲೆಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿಚಾರವಾಗಿ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದೇಶದಲ್ಲಿ ದೊಡ್ಡ ಬದಲಾವಣೆ ತರುವ ಈ ಪ್ರಕ್ರಿಯೆಯಲ್ಲಿ ಜನರ ಮತಗಳನ್ನು ಕಾಪಾಡಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಮತಗಳು ಕಡಿಮೆಯಾಗಿರುವುದನ್ನು ಮತ್ತು 50 ಲಕ್ಷಕ್ಕೂ ಹೆಚ್ಚು ಜನರಿಗೆ ನೋಟಿಸ್ ಜಾರಿಗೊಳಿಸುತ್ತಿರುವ ಬೆಳವಣಿಗೆಯನ್ನು ಅವರು ಪ್ರಸ್ತಾಪಿಸಿದ್ದಾರೆ. ಜನರ ಮತ ರಕ್ಷಿಸುವುದು ತಮ್ಮ ಪ್ರಮುಖ ಕರ್ತವ್ಯ ಎಂದು ಅವರು ಪುನರುಚ್ಚರಿಸಿದ್ದಾರೆ.

ಆದರೆ ಇದರ ಬೆನ್ನಲ್ಲೇ, ಕೆಲ ಬಿಜೆಪಿ ನಾಯಕರು ತಮ್ಮ ಹೈಕಮಾಂಡ್ ನಿರ್ದೇಶನದ ಮೇರೆಗೆ ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರು ಹಾಗೂ ದಲಿತರ ಮತಗಳನ್ನು ಫಾರ್ಮ್-7 ಬಳಸಿ ತೆಗೆದುಹಾಕಲು ಮುಂದಾಗಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲೂ ಈ ಕೃತ್ಯ ಎಸಗಲಾಗುತ್ತಿದ್ದು, ಇದಕ್ಕೆ ತಕ್ಕ ದಾಖಲೆಗಳಿವೆ ಎಂದಿದ್ದಾರೆ. ಸಾರ್ವಜನಿಕರು ಈ ಕುರಿತು ತಮ್ಮ ಬಳಿ ಇರುವ ಮಾಹಿತಿಯನ್ನು ತಕ್ಷಣವೇ ಕಚೇರಿಗೆ ತಲುಪಿಸುವಂತೆ ಮನವಿ ಮಾಡಿದ್ದು, ಈ ಗಂಭೀರ ಅಕ್ರಮದ ವಿರುದ್ಧ ಕ್ರಿಮಿನಲ್ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

Tags:

error: Content is protected !!