ರಾಜ್ಯದಲ್ಲಿ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಆಗ್ರಹಿಸಿದರು. ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸುತ್ತಿದ್ದು, ತಂಡ ಭೇಟಿ ನೀಡುವ ಪ್ರದೇಶಗಳಿಗೆ ತೆರಳಿ ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಮನವಿ ಸಲ್ಲಿಸಲಾಗುವುದು ಎಂದರು.

ರಾಜ್ಯ ಸರ್ಕಾರ ತನ್ನ ಖಾತೆಯಿಂದ ತಕ್ಷಣ ಎಕರೆಗೆ ಕನಿಷ್ಠ ₹25 ಸಾವಿರ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3,650 ಎಫ್ಆರ್ಪಿ ನಿಗದಿ ಮಾಡಿದ್ದು, ರಾಜ್ಯ ಸರ್ಕಾರ ಪ್ರತಿ ಟನ್ಗೆ ₹1,000 ಎಸ್ಎಪಿ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಕಬ್ಬಿನ ಉಪ ಉತ್ಪನ್ನಗಳಾದ ಎಥನಾಲ್, ಸಿಬಿಜಿ, ಬಯೋಪ್ಲಾಸ್ಟಿಕ್ ಹಾಗೂ ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬಹುದು ಎಂದರು. ರೈತರ ಹೋರಾಟವು ವ್ಯಕ್ತಿಗತ ಟೀಕೆಗೆ ಸೀಮಿತವಾಗದೆ, ರೈತರ ಹಿತದ ಉದ್ದೇಶದಿಂದ ನಡೆಯಬೇಕು. ರೈತ ಸಂಘಟನೆಗಳ ಹೋರಾಟಕ್ಕೆ ಬಿಜೆಪಿ ಸದಾ ಬೆಂಬಲ ನೀಡಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಬಾಲರಾಜ ರೆಡ್ಡಿ, ಶಿವಾನಂದ ಭುಯ್ಯಾರ, ಗೀತಾ ಚೌಧರಿ ಹಾಗೂ ವಿಜಯ ಜೋಶಿ ಉಪಸ್ಥಿತರಿದ್ದರು.
