ಸಾಂಸ್ಕೃತಿಕ ನಾಯಕ ಬಸವಣ್ಣನವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ರವಿ ಹಂಚ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ವೇದಿಕೆ ವತಿಯಿಂದ ಶನಿವಾರ ಚಡಚಣ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಮುಖಂಡ ದ್ಯಾಪಗೌಡ ಪಾಟೀಲ ಹಾಗೂ ಶ್ರೀ ವಿರಕ್ತಮಠದ ಶ್ರೀ ಮ.ನಿ.ಪ್ರ. ಷಡಕ್ಷರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಲಿಂಗಾಯತ ಸಮಾಜದ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದು, ಸಮಾಜ ಮೃದು ಸ್ವಭಾವದ್ದೆಂದು ಭಾವಿಸಲಾಗಿದೆ.
ಆದರೆ ಲಿಂಗಾಯತ ಸಮಾಜ ಪ್ರಬಲ ಸಮಾಜವಾಗಿದೆ ಎಂದು ಹೇಳಿದರು. ಬಸವಣ್ಣನವರು ಯಾವುದೇ ಒಂದು ಸಮಾಜ ಅಥವಾ ಧರ್ಮಕ್ಕೆ ಸೀಮಿತರಾದವರಲ್ಲ. ಕಾಯಕ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳ ಮೂಲಕ ವಿಶ್ವಕ್ಕೆ ಸಂದೇಶ ಸಾರಿದ ಮಹಾನ್ ಮಾನವತಾವಾದಿಯಾಗಿದ್ದಾರೆ.
ಅಂತಹ ಮಹಾನ್ ಶರಣರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಹಾಗೂ ಕೃತಿಗಳನ್ನು ರಚಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಕುರಿತು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಸಂಜೆ ಇಂಗಳೇ ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ದೇವಪ್ಪಗೌಡ ಪಾಟೀಲ, ಮಾದೇವ ಬನಸೋಡೆ, ಸೋಮ ಬಡಿಗೇರ, ಮುರುಗೇಂದ್ರ ಸಿಂಪಿ ಸೇರಿದಂತೆ ಸಮಾಜದ ಮುಖಂಡರು, ಯುವಕರು ಉಪಸ್ಥಿತರಿದ್ದರು.
