Vijaypura

ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ಖಂಡನೀಯ: ಪ್ರೊ. ರಾಜು ಆಲಗೂರ

Share

ವಿಶ್ವಗುರು, ಸಾಂಸ್ಖತಿಕ ನಾಯಕ ಬಸವಣ್ಣನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹಾಗೂ ಅವರನ್ನು ಕಳನಾಯಕ, ಕೊಲೆಗಡುಕ ಮತ್ತು ಭ್ರಷ್ಟಾಚಾರಿ ಎಂಬಂತೆ ಚಿತ್ರಿಸುವ ಪ್ರಯತ್ನವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಧುರೀಣ ಪ್ರೊ. ರಾಜು ಆಲಗೂರ ಹೇಳಿದರು. ವಿಜಯಪುರ ನಗರದಲ್ಲಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕ ಪೌರತ್ವ ಪಡೆದಿರುವ ರವಿ ಹಂಜ್ ಅವರು ಬರೆದಿರುವ ‘ಬಸವ ಮಂಟಪ’ ಕೃತಿಯಲ್ಲಿ ಬಸವಣ್ಣನವರು ಖಜಾನೆ ಲೂಟಿ ಮಾಡಿದರು, ಬಿಜ್ಜಳನ ಕೊಲೆಗೆ ಕಾರಣರಾದರು ಎಂಬಿತ್ಯಾದಿ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ.

ಇಂತಹ ಕೃತಿಗಳ ಮೂಲಕ ಬಸವಣ್ಣನವರ ಸಮಗ್ರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿದರು. ಬಸವಣ್ಣನವರು ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನಗಳ ಮೂಲಕ ಕಳ್ಳತನ, ಸುಳ್ಳು, ಕೊಲೆ ಮತ್ತು ಅನ್ಯಾಯಗಳಿಂದ ದೂರವಿರುವ ಉದಾತ್ತ ಬದುಕಿನ ಸಂದೇಶವನ್ನು ಜಗತ್ತಿಗೆ ಸಾರಿದವರು. ಜಾತಿ ವ್ಯವಸ್ಥೆ ಪ್ರಬಲವಾಗಿದ್ದ 12ನೇ ಶತಮಾನದಲ್ಲಿಯೇ ಸಮಾನತೆ, ಮಾನವೀಯತೆ ಮತ್ತು ಮಹಿಳೆಯರ ಸಾಮಾಜಿಕ ಗೌರವಕ್ಕೆ ಆದ್ಯತೆ ನೀಡಿದ ಮಹಾನ್ ಸಮಾಜ ಸುಧಾರಕರಾಗಿದ್ದಾರೆ. ಮಾದಾರ ಚೆನ್ನಯ್ಯನ ಮನೆಯ ಮಗ ಎಂದು ಹೇಳಿಕೊಳ್ಳುವ ಮೂಲಕ ಜಾತಿ ಮೀರಿ ಮಾನವೀಯತೆಯ ಸಂದೇಶ ಸಾರಿದ್ದರು. ಅನುಭವ ಮಂಟಪದ ಮೂಲಕ ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ನೀಡಿದ್ದರು ಎಂದು ಹೇಳಿದರು.

ಬಸವಣ್ಣನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನಗಳು ಹಿಂದಿನಿಂದಲೂ ನಡೆಯುತ್ತಿವೆ. ಈ ಕೃತಿಯ ಪ್ರಕಟಣೆಗೆ ಸಂಬಂಧಿಸಿದಂತೆ ಪ್ರಕಾಶಕ ವಿಶ್ವೇಶ್ವರ ಭಟ್ ಅವರನ್ನೂ ಖಂಡಿಸುತ್ತೇವೆ. ರವಿ ಹಂಜ್ ಅವರ ವಿರುದ್ಧ ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ಪ್ರಕಾಶಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇನ್ನೂ ರವಿ ಹಂಜ್ ಅವರು ಅಮೆರಿಕ ಪೌರತ್ವ ಹೊಂದಿರುವ ಕಾರಣ ಕಾನೂನು ಕ್ರಮದ ವಿಚಾರದಲ್ಲಿ ತಾಂತ್ರಿಕ ಸಮಸ್ಯೆಗಳಿವೆ ಎಂಬ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಅಮೆರಿಕ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕು ಎಂದರು. ಬುದ್ಧ, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ರಾಷ್ಟ್ರೀಯ ಮಹಾಪುರುಷರನ್ನು ಅವಮಾನಿಸುವ ಪ್ರಯತ್ನಗಳು ನಡೆಯುತ್ತಿರುವುದು ಖಂಡನೀಯ. ಬಸವಣ್ಣನವರು ಈ ನಾಡಿನ ವಿವೇಕ, ಸಮಾನತೆ ಮತ್ತು ಮಹಿಳಾ ಗೌರವದ ಪ್ರತೀಕವಾಗಿದ್ದಾರೆ. ಅವರ ಮಹತ್ವವನ್ನು ಗುರುತಿಸಿ ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಬಸವಣ್ಣನವರ ಅನುಯಾಯಿಗಳು ಜಾತಿ, ಧರ್ಮ ಹಾಗೂ ಪಕ್ಷಾತೀತವಾಗಿ ಒಂದಾಗಿ ಇಂತಹ ಕೃತ್ಯಗಳ ವಿರುದ್ಧ ಧ್ವನಿ ಎತ್ತಬೇಕು. ಬಸವಣ್ಣನವರಿಗೆ ಯಾವುದೇ ಕಾಲದಲ್ಲಿಯೂ ಅವಮಾನ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಮಾಧ್ಯಮ ಗೋಷ್ಠಿಯಲ್ಲಿ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:

error: Content is protected !!