ಉತ್ತರ ಕರ್ನಾಟಕ ಜೀವನದಿಯಾಗಿರುವ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಜಲಾಶಯದ ನೀರಿನ ಮಟ್ಟವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸುವ ಹಿನ್ನೆಲೆಯಲ್ಲಿ ಮುಳುಗಡೆ ಯಾಗಲಿರುವ ರೈತರಿಗೆ ಭೂಸ್ವಾಧೀನ ಹಾಗೂ ಪರಿಹಾರ ಪ್ರಕ್ರಿಯೆಗಳನ್ನು ತ್ವರಿತ ಗೊಳಿಸುವಂತೆ ಸಚಿವ ಎಂ.ಬಿ.ಪಾಟೀಲ ಅವರು ರಾಜ್ಯ ಜಲಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದಿಂದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ 184 ಗ್ರಾಮಗಳ ಸುಮಾರು 75,563 ಎಕರೆ ಭೂಮಿ ಮುಳುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ನ್ಯಾಯಯುತ ಹಾಗೂ ತ್ವರಿತ ಪರಿಹಾರ ಒದಗಿಸುವುದು ಅಗತ್ಯವಾಗಿದೆ ಎಂದು ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಪ್ರಸ್ತಾವಿತ ₹3,000 ಕೋಟಿ ಪರಿಹಾರ ಪಾವತಿ ಸಂದರ್ಭದಲ್ಲಿ ಬಬಲೇಶ್ವರ ತಾಲೂಕಿನ ಕನಿಷ್ಠ 1,000 ಎಕರೆ ಭೂಮಿಗೆ, ಅಂದಾಜು ಶೇ.20ರಷ್ಟು ಪ್ರಮಾಣದಲ್ಲಿ, ಸುಮಾರು ₹500 ಕೋಟಿ ಪರಿಹಾರವನ್ನು ಕಾಯ್ದಿರಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ.
ಅಲ್ಲದೇ ಶಿರೂರ, ಕಣಬೂರ, ಚಿಕ್ಕಗಲಗಲಿ ಹಾಗೂ ಹೊಸೂರ ಗ್ರಾಮಗಳ ರೈತರಿಗೆ 2026-27ನೇ ಆರ್ಥಿಕ ವರ್ಷದಲ್ಲೇ ಪರಿಹಾರ ಒದಗಿಸುವಂತೆ ಕೋರಲಾಗಿದೆ. ಬಾಕಿ ಉಳಿದಿರುವ 10 ಗ್ರಾಮಗಳಿಗೂ ಕೂಡಲೇ 11(1) ಅಧಿಸೂಚನೆ ಜಾರಿಗೊಳಿಸಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸುವಂತೆ ಸಚಿವರಿಗೆ ಮನವಿ ಮಾಡಲಾಗಿದೆ.
ಮುಳುಗಡೆ ಪ್ರದೇಶದ ರೈತರಿಗೆ ಪರಿಹಾರ ವಿಳಂಬವಾಗದಂತೆ ಅಗತ್ಯ ಕ್ರಮ ಕೈಗೊಂಡು, ಸರ್ಕಾರದ ವತಿಯಿಂದ ಶೀಘ್ರ ಪರಿಹಾರ ಬಿಡುಗಡೆಗೆ ಕ್ರಮವಹಿಸಬೇಕು ಎಂದು ಎಂ.ಬಿ.ಪಾಟೀಲ ಒತ್ತಾಯಿಸಿದ್ದಾರೆ.
