Vijaypura

ಜನಗಣತಿಯಲ್ಲಿ 21 ವಿಧದ ಅಂಗವೈಕಲ್ಯಗಳನ್ನು ಪ್ರತ್ಯೇಕವಾಗಿ ದಾಖಲಿಸಲು ಆಗ್ರಹ

Share

2027ರ ಜನಗಣತಿಯಲ್ಲಿ ಅಂಗವಿಕಲರ ಹಕ್ಕುಗಳ ಕಾಯ್ದೆ–2016ರಡಿ ಮಾನ್ಯತೆ ಪಡೆದಿರುವ ಎಲ್ಲ 21 ವಿಧದ ಅಂಗವೈಕಲ್ಯಗಳನ್ನು ಪ್ರತ್ಯೇಕವಾಗಿ ದಾಖಲಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವಿಜಯಪುರ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಈ ಸಂಬಂಧ ಒಕ್ಕೂಟದ ಅಧ್ಯಕ್ಷ ವಿನೋದ ಎಂ. ಖೇಡ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸ ಲಾಯಿತು. ಪ್ರಸ್ತಾವಿತ ಜನಗಣತಿ ಮಾಹಿತಿಯಲ್ಲಿ ಕೇವಲ ಒಂಬತ್ತು ವಿಧದ ಅಂಗವೈಕಲ್ಯಗಳನ್ನು ಪ್ರತ್ಯೇಕವಾಗಿ ದಾಖಲಿಸುವ ಕ್ರಮ ಸಮರ್ಪಕವಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು. ದೃಷ್ಟಿ, ಶ್ರವಣ, ಮಾತು, ಚಲನಶೀಲತೆ, ಬೌದ್ಧಿಕ ಅಂಗವೈಕಲ್ಯ, ಮಾನಸಿಕ ಅಸ್ವಸ್ಥತೆ, ಆಸಿಡ್ ದಾಳಿಯಿಂದ ಉಂಟಾದ ಅಂಗವೈಕಲ್ಯ, ದೀರ್ಘಕಾಲೀನ ನರಸಂಬಂಧಿ ಕಾಯಿಲೆ ಹಾಗೂ ರಕ್ತಸಂಬಂಧಿ ಕಾಯಿಲೆಗಳನ್ನು ಮಾತ್ರ ಪ್ರತ್ಯೇಕವಾಗಿ ಪರಿಗಣಿಸಿದರೆ, ಇತರ ಅಂಗವೈಕಲ್ಯಗಳ ನಿಖರ ಮಾಹಿತಿ ದಾಖಲಾಗದೆ ಉಳಿಯುವ ಸಾಧ್ಯತೆಯಿದೆ ಎಂದು ಹೇಳಿದರು. ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್, ನಿರ್ದಿಷ್ಟ ಕಲಿಕಾ ಅಸಮರ್ಥತೆ, ಕುಬ್ಜತೆ, ಕುಷ್ಠರೋಗದಿಂದ ಗುಣಮುಖ ರಾದವರು, ಬಹು ಅಂಗವೈಕಲ್ಯ ಹೊಂದಿರುವವರು ಹಾಗೂ ಕಿವುಡು-ಕುರುಡುತನ ಸೇರಿದಂತೆ ಕಾಯ್ದೆಯಡಿ ಗುರುತಿಸಲಾದ ಎಲ್ಲ ಅಂಗವೈಕಲ್ಯಗಳನ್ನು ಪ್ರತ್ಯೇಕವಾಗಿ ದಾಖಲಿಸುವ ಅಗತ್ಯವಿದೆ ಎಂದು ವಿನೋದ ಖೇಡ ಒತ್ತಾಯಿಸಿದರು. ಜನಗಣತಿಯ ಅಂಕಿ-ಅಂಶಗಳು ಸರ್ಕಾರದ ಯೋಜನೆಗಳು, ಹಣಕಾಸು ಹಂಚಿಕೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಪುನರ್ವಸತಿ, ಸಾಮಾಜಿಕ ಭದ್ರತೆ ಹಾಗೂ ಪ್ರವೇಶಯೋಗ್ಯತೆ ಸೇರಿದಂತೆ ವಿವಿಧ ಸಾರ್ವಜನಿಕ ಸೇವೆಗಳ ಯೋಜನೆ ರೂಪಿಸಲು ಪ್ರಮುಖ ಆಧಾರವಾಗಿವೆ. ಹೀಗಾಗಿ ಅಂಗವಿಕಲರ ನಿಖರ ಜನಸಂಖ್ಯೆ ಮತ್ತು ಅವರ ಅಂಗವೈಕಲ್ಯದ ಸ್ವರೂಪ ಜನಗಣತಿಯಲ್ಲಿ ಸರಿಯಾಗಿ ದಾಖಲಾಗಬೇಕು ಎಂದು ಅವರು ಹೇಳಿದರು. ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲಿಕಾರ ಮಾತನಾಡಿ, ಅಂಗವಿಕಲರ ಹಕ್ಕುಗಳ ಕಾಯ್ದೆ–2016ರಲ್ಲಿ ಗುರುತಿಸಿರುವ ಎಲ್ಲ 21 ನಿರ್ದಿಷ್ಟ ಅಂಗವೈಕಲ್ಯಗಳನ್ನು ಜನಗಣತಿ ಯಲ್ಲಿ ಪ್ರತ್ಯೇಕವಾಗಿ ದಾಖಲಿಸುವ ಮೂಲಕ ಕಾನೂನಿನ ಮಾನ್ಯತೆ ಮತ್ತು ಜನಗಣತಿಯ ವರ್ಗೀಕರಣದಲ್ಲಿ ಏಕರೂಪತೆ ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಂ.ಬಿ. ಉಮರಾಣಿ, ತಾಲೂಕು ಅಧ್ಯಕ್ಷ ಅಂಬಣ್ಣ ಗುನ್ನಾಪುರ ಸೇರಿದಂತೆ ಮಲ್ಲು ಬಿರಾದಾರ, ಸಂತೋಷ ಕಲಗುಡಿ, ಅರುಣ ಹಾಡದೆ, ಅಡಿವೆಪ್ಪ ಅಂಬಿಗೇರ, ಮೊಹಮ್ಮದ್ ರಫೀಕ್ ಬಾಗವಾನ, ಸಂಜು ಬೆಳ್ಳೆಣ್ಣವರ, ಮಲ್ಲಿಕಾರ್ಜುನ ಲಂಗೋಟಿ, ರಾಜು ತಡಲಗಿ, ಕಸ್ತೂರಿ ಬೂದಿಹಾಳ, ಸೈರಾಬಾನು ಬೋರಗಿ, ಭಾಗಪ್ಪ ಹರಿಜನ, ರಾಮು ಮೂಡಗಿ, ಇಕ್ಬಾಲ್ ಕೊಡೇಕಲ, ಗಣೇಶ ಡೋಣೂರ, ಅಬ್ದುಲ್ ರಜಾಕ್ ನಿಡೋಣಿ, ಪೂರ್ಣಚಂದ್ರ ತೇಜಸ್ವಿ ಜಗಲಿ, ಲಕ್ಷ್ಮಣ ಪೂಜಾರಿ, ಸಿದ್ದಪ್ಪ ಹಡಪದ, ಸುಮೀತ ಪಾಂಡಿಚೇರಿ, ಫೀರೋಜ್, ದ್ರಾಕ್ಷಾಯಣಿ ಗೋರ್ಪಡೆ, ಅಶೋಕ ಚೋಳಕೆ, ಹಸೀನಸಾಬ ಮುಲ್ಲಾ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಅಂಗವಿಕಲರು ಭಾಗವಹಿಸಿದ್ದರು.

Tags:

error: Content is protected !!