ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಬಬಲೇಶ್ವರ ಕ್ಷೇತ್ರದ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಕ್ಷೇತ್ರ ನೋಡಿಕೊಳ್ಳುವಂತೆ ಎಂ.ಬಿ. ಪಾಟೀಲರಿಗೆ ಯತ್ನಾಳ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಸಚಿವರ ಆಪ್ತರಿಂದ ಭೂ ಕಬಳಿಕೆ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ದಾಖಲೆಗಳು ತಮ್ಮ ಬಳಿ ಇವೆ ಎಂದು ಯತ್ನಾಳ ಹೇಳಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…


ವಿಜಯಪುರ ನಗರ ಶಾಸಕ ಹಾಗೂ ಸಚಿವ ಎಂ.ಬಿ.ಪಾಟೀಲ ನಡುವಿನ ಟಾಕ್ ವಾರ್ ಮುಂದುವರೆದಿದೆ. ಸಚಿವ ಎಂ.ಬಿ. ಪಾಟೀಲರ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕ ಯತ್ನಾಳ,
ನಾನು ಸಚಿವ ಎಂ.ಬಿ. ಪಾಟೀಲರ ಹಂಗಿನಿಂದ ಶಾಸಕನಾಗಿಲ್ಲ. ನೀವು ಹಿಂದೆ ಸೋತಾಗ ಎದುರಿಸಿದ ಕಷ್ಟ ನನಗೆ ಗೊತ್ತಿದೆ. ಬಿಎಲ್‌ಡಿಇ ವಿಚಾರದಲ್ಲೂ ನಿಮಗೆ ತೊಂದರೆಯಾದಾಗ ನಿಮ್ಮ ಜೊತೆ ನಿಂತಿದ್ದೇನೆ. ಅಭಿವೃದ್ಧಿ ವಿಚಾರದಲ್ಲೂ ಸದಾ ಬೆಂಬಲಿಸಿದ್ದೇನೆ ಎಂದರು.
ನೀವು ಬಬಲೇಶ್ವರ ನೋಡಿಕೊಳ್ಳಿ, ಅದು ಸಾಕಾಗಿದೆ ಎಂದು ಜನರು ಹೇಳುತ್ತಿದ್ದಾರೆ. ನಿಮ್ಮ ಕ್ಷೇತ್ರದ ಬಗ್ಗೆ ಗಮನಹರಿಸಿ, ನನಗೆ ಸವಾಲು ಹಾಕಲು ಬರಬೇಡಿ ಎಂದು ಎಂ.ಬಿ. ಪಾಟೀಲರಿಗೆ ಯತ್ನಾಳ ತಿರುಗೇಟು ನೀಡಿದ್ದಾರೆ.
ಇನ್ನೂ ಸಚಿವ ಎಂ.ಬಿ. ಪಾಟೀಲರ ಆಪ್ತರಿಂದಲೇ ಭೂ ಕಬಳಿಕೆ ನಡೆಯುತ್ತಿದೆ ಎಂದು ಯತ್ನಾಳ ಆರೋಪಿಸಿದ್ದಾರೆ.. ರುದ್ರಗೌಡ ಸೇರಿದಂತೆ ಹಲವರ ಜಮೀನುಗಳನ್ನು ಸಚಿವರ ಹಿಂಬಾಲಕರು ಕಬಳಿಸಿದ್ದಾರೆ ಎಂದು ದೂರಿದರು. ಈ ಪ್ರಕರಣಗಳ ತನಿಖೆ ಚುರುಕುಗೊಳಿಸಿದ್ದ ನಿಷ್ಠಾವಂತ ಅಧಿಕಾರಿಯನ್ನೇ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ ಯತ್ನಾಳ, ಭೂಕಬಳಿಕೆಗೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇವೆ. ಅಗತ್ಯವಿದ್ದರೆ ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಸವಾಲು ಹಾಕಿದರು. ಇದೇ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಅವರ ವಿರುದ್ಧ ಕಾಂಗ್ರೆಸ್ ಆರೋಪ ಮಾಡುತ್ತಿರುವುದನ್ನೂ ಯತ್ನಾಳ ಟೀಕಿಸಿದರು. ದಕ್ಷ ದಲಿತ ಅಧಿಕಾರಿಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಬಾರದು ಎಂದರು.
ಒಟ್ಟಾರೆ, ಸಚಿವ ಎಂ.ಬಿ. ಪಾಟೀಲ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಡುವಿನ ವಾಗ್ದಾಳಿ ಮತ್ತೊಮ್ಮೆ ತೀವ್ರಗೊಂಡಿದ್ದು, ವಿಜಯಪುರ ಜಿಲ್ಲೆಯಲ್ಲಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಆರೋಪ- ಪ್ರತ್ಯಾರೋಪಗಳ ಮೂಲಕ ಇಬ್ಬರು ನಾಯಕರ ನಡುವಿನ ರಾಜಕೀಯ ಸಮರ ಮುಂದುವರಿದಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.
