ಖಾನಾಪುರ ನಗರದ ಹಳೇ ಬಸ್ ನಿಲ್ದಾಣದವರೆಗೆ ಎಲ್ಲಾ ಬಸ್ ಸಂಚಾರವನ್ನು ಪುನರಾರಂಭಿಸುವಂತೆ ಹಾಗೂ ಮಲಪ್ರಭಾ ನದಿ ಸೇತುವೆ ವರೆಗಿನ ಅಪೂರ್ಣಗೊಂಡ ರಸ್ತೆ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸುವಂತೆ ಒತ್ತಾಯಿಸಿ, ಬಿಜೆಪಿ ಮುಖಂಡರ ನೇತೃತ್ವದಲ್ಲಿ ಸಚಿವ ಸತೀಶ ಜಾರಕಿಹೊಳಿಗೆ ಮನವಿ ಸಲ್ಲಿಸಲಾಗಿದೆ.


ಖಾನಾಪುರ ನಗರದಲ್ಲಿ ಕಳೆದ 50 ವರ್ಷಗಳಿಂದ ಹಳೇ ಬಸ್ ನಿಲ್ದಾಣದವರೆಗೆ ಎಲ್ಲಾ ಬಸ್ಸುಗಳು ನಿಲ್ಲುವ ಸೌಲಭ್ಯವಿತ್ತು. ಆದರೆ ಆಡಳಿತ ಮಂಡಳಿ ಇತ್ತೀಚೆಗೆ ಇದನ್ನು ನಿಲ್ಲಿಸಿದ್ದರಿಂದ ಹಿರಿಯ ನಾಗರಿಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಖಾನಾಪುರದ ಲೋಕಮನ್ಯ ಭವನದಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ಬಿಜೆಪಿ ಮಂಡಳ ಉಪಾಧ್ಯಕ್ಷ ಹಾಗೂ ನಗರ ಅಧ್ಯಕ್ಷ ಅಡ್ವೋಕೆಟ್ ಚೇತನ್ ಮಣೇರಿಕರ, ಮುಖಂಡರಾದ ರಾಜೇಂದ್ರ ರಾಯಕಾ, ಧನಶ್ರೀ ಸರ್ದೆಸಾಯಿ ಮತ್ತಿತರರು ಮನವಿ ಸಲ್ಲಿಸಿದರು. ಇದೇ ವೇಳೆ ಹೆಸ್ಕಾಂ ಕಚೇರಿಯಿಂದ ಮಲಪ್ರಭಾ ನದಿ ಸೇತುವೆ ವರೆಗಿನ ಸುಮಾರು 300 ಮೀಟರ್ ಆರ್.ಸಿ.ಸಿ ರಸ್ತೆಯ ಅಪೂರ್ಣ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆಯೂ ಒತ್ತಾಯಿಸಲಾಯಿತು.
