ಖಾನಾಪೂರ ತಾಲೂಕಿನ ನಂದಗಡ ಗ್ರಾಮದ ಮುಗುಳಿನ ದೃಶ್ಯ ನೋಡಿ, ಒಂದು ಓಣೆಯಿಂದ ಮತ್ತೊಂದು ಓಣೆಗೆ ಮುಖ್ಯ ಸಂಪರ್ಕ ಕಲ್ಪಿಸುವ ಈ ಮುಗುಳು ರಸ್ತೆಯ ಮೇಲೆ ಗಿಡ-ಗಂಟೆಗಳು ಬೆಳೆದು ಅರ್ಧ ರಸ್ತೆಯನ್ನೇ ಆವರಿಸಿಕೊಂಡಿವೆ. ಮುಖ್ಯವಾಗಿ ರಾತ್ರಿ ಅಂತೂ ವಿದ್ಯುತ್ ಸಂಪರ್ಕ ಇಲ್ಲದೆ ಅರ್ಧ ರಸ್ತೆಯಲ್ಲಿ ಕತ್ತಲು ಕವಿದ ವಾತಾವರಣವಿದ್ದು, ಗ್ರಾಮಸ್ಥರು ರಾತ್ರಿ ಹೊತ್ತು ಸಂಚರಿಸುವುದು ಅಪಾಯಕಾರಿಯಾಗಿದೆ.

ಹಗಲು ಹೊತ್ತಿನಲ್ಲಿಯೇ ಹಾವು ಸೇರಿದಂತೆ ವಿಷಕಾರಿ ಪ್ರಾಣಿಗಳ ಸಂಚಾರ ಇರುವ ಸಮಯದಲ್ಲಿ, ರಾತ್ರಿ ಅಂತೂ ಭಯದ ವಾತಾವರಣ ನಿರ್ಮಾಣವಾಗಿದೆ. ನಂದಗಡದ ಗ್ರಾಮ ಪಂಚಾಯಿತಿ ಪ್ರಭಾರಿ ಅಧಿಕಾರಿಗಳಾಗಿ ಅಧಿಕಾರದಲ್ಲಿರುವ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಮೇತ್ರಿ ಅವರು ಒಂದೇ ಒಂದು ದಿನ ಕೂಡ ಪಂಚಾಯಿತಿ ವ್ಯಾಪ್ತಿಯ ಅವ್ಯವಸ್ಥೆಯನ್ನು ನೋಡಿಯೇ ಇಲ್ಲ. ಆದರೆ ಜನಸಾಮಾನ್ಯರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾದ ಉಸ್ತುವಾರಿ ಹೊಣೆ ಹೊತ್ತಿರುವ ಇಓ ರಮೇಶ್ ಮೇತ್ರಿ ಅವರು ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ತಾಲ್ಲೂಕು ಮಟ್ಟದ ಅಧಿಕಾರಿಗಳೇ ಉಸ್ತುವಾರಿ ಹೊಣೆ ಹೊತ್ತು ಬೇಜವಾಬ್ದಾರಿಯಿಂದ ವರ್ತಿಸಿದರೆ ಜನಸಾಮಾನ್ಯರ ಗೋಳು ಕೇಳುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಗಮನಹರಿಸಬೇಕಾದ ಅಗತ್ಯವಿದೆ ಎಂದು ಗ್ರಾಮಸ್ಥರ ಆಗ್ರಹವಾಗಿದೆ.
