bagalkot

ತಂದೆಯ ಶವದ ಮುಂದೆಯೇ ಆಸ್ತಿಗಾಗಿ ಕಾದಾಟ: ಬಾಗಲಕೋಟೆ ಜಿಲ್ಲೆಯಲ್ಲಿ ಮನುಷ್ಯತ್ವ ಮರೆತ ಮಕ್ಕಳು!

Share

ಬೆಲೆಕಟ್ಟಲಾಗದ ತಂದೆಯ ಪ್ರೀತಿಯನ್ನು ಮರೆತು, ಕಣ್ಣೀರು ಹಾಕಬೇಕಾದ ಜಾಗದಲ್ಲಿ ಆಸ್ತಿಗಾಗಿ ಕಚ್ಚಾಡುತ್ತಿರುವ ಮಕ್ಕಳ ವಿಕೃತಿ ಇದು. ಶವದ ಮುಂದೆಯೇ ಆಸ್ತಿಗಾಗಿ ಜಗಳವಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದಿದೆ.

ಮಕ್ಕಳ ಪಾಲಿಗೆ ಪ್ರೀತಿಗಿಂತ ಆಸ್ತಿಯೇ ದೊಡ್ಡದಾಯಿತೇ? ತಂದೆ ಇನ್ನಿಲ್ಲವಾಗಿ ಅಂತಿಮಯಾತ್ರೆಗೆ ಸಿದ್ಧತೆ ನಡೆಯಬೇಕಿದ್ದ ಸ್ಥಳದಲ್ಲಿ, ಆಸ್ತಿಯ ಹಂಚಿಕೆಗಾಗಿ ಮಕ್ಕಳು ನಡೆಸಿದ ರಂಪಾಟ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ನಡೆದ ಈ ಘಟನೆಯು ಮಾನವೀಯತೆಯೇ ಮರೆಯಾಗುತ್ತಿರುವ ದುಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ಮೃತ ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದು, ಅವರ ಮಕ್ಕಳು ತಂದೆಯ ಶವವನ್ನಿಟ್ಟುಕೊಂಡು ಬೀದಿಗಿಳಿದು ಆಸ್ತಿಗಾಗಿ ಪಟ್ಟುಹಿಡಿದಿರುವ ದೃಶ್ಯ ನೋಡುಗರ ಕರುಳು ಚುರುಕೆನ್ನುವಂತೆ ಮಾಡಿದೆ.

ಜಮಖಂಡಿ ಹೊರವಲಯದಲ್ಲಿರುವ 2 ಎಕರೆ 17 ಗುಂಟೆ ಜಾಗದ ಒಡೆತನಕ್ಕಾಗಿ ಲಕ್ಷಣ ವಾಗೇನ್ನವರ ಹಾಗೂ ಪ್ರಕಾಶ ವಾಗೇನ್ನವರ ಸಹೋದರರ ಕುಟುಂಬಗಳ ನಡುವೆ ಈ ತಿಕ್ಕಾಟ ಜೋರಾಗಿದೆ. ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ತಾವೇ ನೋಡಿಕೊಂಡಿರುವುದಾಗಿ ಮೊದಲನೇ ಪತ್ನಿಯ ಮಕ್ಕಳು ವಾದಿಸುತ್ತಿದ್ದರೆ, ನಮಗೂ ಆಸ್ತಿಯಲ್ಲಿ ಕಾನೂನುಬದ್ಧ ಹಕ್ಕು ಬೇಕೆಂದು ಎರಡನೇ ಪತ್ನಿಯ ಮಕ್ಕಳು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಅಂತಿಮ ಸಂಸ್ಕಾರದಂತಹ ಪವಿತ್ರ ಕಾರ್ಯವನ್ನು ಬದಿಗೊತ್ತಿ, ಶವದ ಮುಂದೆಯೇ ಆಸ್ತಿಗಾಗಿ ಹೊಡೆದಾಡಿಕೊಂಡಿರುವ ಈ ಅಕ್ಕ-ತಮ್ಮಂದಿರ ನಡೆ ಈಗ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ.

Tags:

error: Content is protected !!