Belagavi

ಬೆಳಗಾವಿಯ ಬಿIMS ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ!

Share

ಬೆಳಗಾವಿಯ ಬಿಐಎಮ್‌ಎಸ್ (BIMS) ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಬಿಲ್ಲಿಂಗ್ ಸಿಬ್ಬಂದಿಯ ಸರಿಯಾದ ಮಾರ್ಗದರ್ಶನವಿಲ್ಲದೆ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಿಪಿಎಲ್ ಮತ್ತು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ ರೋಗಿಗಳಿಗೆ ರಿಯಾಯಿತಿ ಪಡೆಯಲು 10ನೇ ಸಂಖ್ಯೆಯ ಒಪಿಡಿಗೆ ಹೋಗಿ ಸೀಲ್ ಹಾಕಿಸಿಕೊಂಡು ಬರುವಂತೆ ಬಿಲ್ಲಿಂಗ್ ಸಮಯದಲ್ಲಿ ಮಾತ್ರ ತಿಳಿಸಲಾಗುತ್ತಿದೆ. ಇದರಿಂದಾಗಿ ತೀವ್ರ ಎದೆನೋವಿನಿಂದ ಬಳಲುತ್ತಿರುವ ರೋಗಿಗಳು ತುರ್ತು ಚಿಕಿತ್ಸೆ ಸಿಗದೆ ಗಂಟೆಗಟ್ಟಲೆ ಕಾಯುವಂತಾಗಿದೆ.

ಬೆಳಗಾವಿಯ ಬಿಐಎಮ್‌ಎಸ್ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಸರಿಯಾದ ಮಾಹಿತಿ ಕೊರತೆಯಿಂದಾಗಿ ಬಡ ರೋಗಿಗಳು ತೀವ್ರ ಕಷ್ಟ ಎದುರಿಸುತ್ತಿದ್ದಾರೆ. ರೋಗಿಗಳು ಚಿಕಿತ್ಸೆಗೆ ಬಂದ ಆರಂಭದಲ್ಲೇ ಉಚಿತ ಅಥವಾ ರಿಯಾಯಿತಿ ನಿಯಮಗಳ ಬಗ್ಗೆ ಮಾಹಿತಿ ನೀಡದ ವೈದ್ಯರು ಹಾಗೂ ಸಿಬ್ಬಂದಿ, ಬಿಲ್ಲಿಂಗ್ ಕೌಂಟರ್‌ಗೆ ಹೋದಾಗ 10ನೇ ಸಂಖ್ಯೆಯ ಒಪಿಡಿಗೆ ಹೋಗಿ ಸೀಲ್ ತರಲು ಸೂಚಿಸುತ್ತಿದ್ದಾರೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಬರುವಷ್ಟರಲ್ಲಿ ಇಸಿಜಿ (ECG) ಸಿಬ್ಬಂದಿ ಊಟದ ವಿರಾಮಕ್ಕೆ ತೆರಳುತ್ತಿರುವುದರಿಂದ, ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳು ಎದೆನೋವಿನಿಂದ ಬಳಲುತ್ತಾ ಇಸಿಜಿ ಕೊಠಡಿಯ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಯೋವೃದ್ಧರು ಹಾಗೂ ತೀವ್ರ ಎದೆನೋವು ಇರುವ ರೋಗಿಗಳು ಹೀಗೆ ಗಂಟೆಗಟ್ಟಲೆ ಕಾಯುವಾಗ ಅವರಿಗೆ ಏನಾದರೂ ಅನಾಹುತ ಸಂಭವಿಸಿದರೆ ಅಥವಾ ಹೃದಯಾಘಾತವಾದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ಬಡ ರೋಗಿಗಳ ಜೀವದ ಜೊತೆ ಆಟವಾಡುತ್ತಿರುವ ಆಸ್ಪತ್ರೆ ಸಿಬ್ಬಂದಿಯ ಈ ಧೋರಣೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಬಿಐಎಮ್‌ಎಸ್ ನಿರ್ದೇಶಕರು ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ನಿಯಮಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡುವ ಸೂಕ್ತ ವ್ಯವಸ್ಥೆ ಮಾಡಿ ರೋಗಿಗಳಿಗೆ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

Tags:

error: Content is protected !!