State

ಕೋಳಿ ಕೂಗಲ್ಲ…ಹುಂಜ ಕೂಗುತ್ತೇ…

Share

ನಿಮ್ಮದೇ ಪಕ್ಷದ ಮುಖ್ಯಮಂತ್ರಿಗಳು ಇದ್ದಾಗ ಎಷ್ಟು ಸಲ ಸಾಲ ಮನ್ನಾ ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಅಧಿಕಾರದಲ್ಲಿದ್ದಾಗ ಒಂದು ಮಾತು, ಅಧಿಕಾರವಿಲ್ಲದಿದ್ದಾಗ ಮತ್ತೊಂದು ಮಾತು ಆಡುವುದು ಸರಿಯಲ್ಲ. ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರಕ್ಕೆ ರೈತರ ಪರವಾಗಿ ಕೆಲಸ ಮಾಡುವ ಜವಾಬ್ದಾರಿಯಿದೆ ಎಂದು ಸಹಕಾರ ಸಚಿವ ಲಕ್ಷ್ಮಣ್ ಸವದಿ ಎಚ್ಚರಿಸಿದರು.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ, ಧನಕರುಗಳಿಗೆ ಮೇವಿನ ಸಮಸ್ಯೆ ಎದುರಾಗಲಿದೆ ಮತ್ತು ಈಗಾಗಲೇ ವಿದ್ಯುತ್ ಉತ್ಪಾದನೆಯಲ್ಲೂ ಕೊರತೆ ಕಾಣಿಸಿಕೊಳ್ಳುತ್ತಿದ್ದು, ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದರು. ಕೃಷ್ಣಾ ನದಿಗೆ ಇನ್ಫ್ಲೋ (Inflow) ಬಂದ ನಂತರ ಎಲ್ಲಾ ಲಿಫ್ಟ್ ಇರಿಗೇಷನ್ (Lift Irrigation) ಯೋಜನೆಗಳನ್ನು ಬಂದ್ ಮಾಡಿಡಬೇಕಾಗುತ್ತದೆ. ಇನ್ಫ್ಲೋ ನವೆಂಬರ್ ವರೆಗೆ ಮಾತ್ರ ಇರಬಹುದು, ನವೆಂಬರ್ ದಾಟಿದ ಮೇಲೆ ಪ್ರತಿವಾರದಲ್ಲಿ ಒಂದು ದಿನ ಎಲ್ಲಾ ಪಂಪ್‌ಸೆಟ್‌ಗಳನ್ನು ಬಂದ್ ಮಾಡುವ ಪ್ರಸಂಗ ಬರಬಹುದು ಎಂದು ತಿಳಿಸಿದರು.

ಕಬ್ಬು ಸೇರಿದಂತೆ ಎಲ್ಲಾ ಬೆಳೆಗಳಿಗೂ ಸೂಕ್ತ ದರ ಹೆಚ್ಚಳ ಸಿಗಬೇಕು. ಆ ದರ ಸಿಗಬೇಕೆಂದರೆ ಕೇಂದ್ರ ಸರ್ಕಾರ ಎಂಎಸ್‌ಪಿ (MSP) ದರವನ್ನು ಫಿಕ್ಸ್ ಮಾಡಬೇಕು. ಕಳೆದ ಹತ್ತು ವರ್ಷಗಳಿಂದ ಎಂಎಸ್‌ಪಿ ದರದಲ್ಲಿ ಯಾವುದೇ ಪರಿಷ್ಕರಣೆಯಾಗಿಲ್ಲ. ಒಂದು ಕಡೆ ಸಕ್ಕರೆ ಇನ್ನೊಂದು ಕಡೆ ಕಬ್ಬಿನ ದರ ನಿಗದಿ ಮಾಡಬೇಕು. ಕಾರ್ಖಾನೆಯವರಿಗೆ ನಿಗದಿತವಾಗಿ ಎಷ್ಟು ಕಬ್ಬು ಇಡಬೇಕು ಎಂಬುದು ತೀರ್ಮಾನವಾಗಬೇಕು. ಅದಾದಮೇಲೆ ಕಬ್ಬಿಗೆ ಏನು ದರ ಕೊಡಬೇಕು ಎಂಬುದನ್ನು ನಿರ್ಧರಿಸಬೇಕು.

ರಾಜ್ಯದಲ್ಲಿ ಪಾದಯಾತ್ರೆಗೆ ಹೆದರಿ ಸರ್ಕಾರವು ಮೂರು ದಿನಗಳ ಅಧಿವೇಶನವನ್ನು ಕರೆದಿದೆ ಎಂಬ ವಿಪಕ್ಷೀಯರ ಆರೋಪದಕ್ಕೆ “ರೂಢಿಯೊಳಗೆ ಕೋಳಿ ಕೂಗಿದರೆ ಬೆಳಕಾಯಿತು ಎನ್ನುತ್ತಾರೆ, ಕೋಳಿ ಕೂಗುವುದಿಲ್ಲ, ಹುಂಜ ಕೂಗುತ್ತದೆ. ಹುಂಜ ಏನು ಹೇಳುತ್ತೆ ಅಂದ್ರೆ, ‘ನಾನು ಕೂಗಿದ ಮೇಲೆನೇ ಇವತ್ತು ಸೂರ್ಯೋದಯ ಆಯಿತು ಇಲ್ಲಾಂದ್ರೆ ಸೂರ್ಯೋದಯ ಆಗ್ತಾ ಇದ್ದಿಲ್ಲ’ ಎಂದುಕೊಳ್ಳುತ್ತದೆ. ಅದೇ ರೀತಿ ತಾವು ಕೂಗಿದ ಮೇಲೆನೇ ಮಳೆ-ಬೆಳೆ ಆಯಿತು ಎಂದು ವಿಪಕ್ಷಗಳು ಅಂದುಕೊಂಡಿವೆ ಎಂದು ವ್ಯಂಗ್ಯವಾಡಿದರು.

ಇಡೀ ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿ ಕೇಂದ್ರ ಸರ್ಕಾರಕ್ಕೆ ಸಮಗ್ರ ಪ್ರಸ್ತಾವನೆಯನ್ನು ಕಳುಹಿಸುತ್ತೇವೆ ಎಂದರು. ಇದೇ ಸಂದರ್ಭದಲ್ಲಿ, ವಿಧಾನ ಪರಿಷತ್‌ನಲ್ಲಿ ನಿಮ್ಮದೇ ಪಕ್ಷದ ಮುಖ್ಯಮಂತ್ರಿಗಳು ಇದ್ದಾಗ ಎಷ್ಟು ಸಲ ಸಾಲ ಮನ್ನಾ ಮಾಡಿದ್ದೀರಿ ಎಂದು ಪ್ರಶ್ನಿಸಿದ ಅವರು, ಅಧಿಕಾರದಲ್ಲಿದ್ದಾಗ ಒಂದು ಮಾತು, ಅಧಿಕಾರವಿಲ್ಲದಿದ್ದಾಗ ಮತ್ತೊಂದು ಮಾತು ಆಡುವುದು ಸರಿಯಲ್ಲ. ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರಕ್ಕೆ ರೈತರ ಪರವಾಗಿ ಕೆಲಸ ಮಾಡುವ ಜವಾಬ್ದಾರಿಯಿದೆ ಎಂದು ಅವರು ಎಚ್ಚರಿಸಿದರು.

Tags:

error: Content is protected !!