Kagawad

ಉಗಾರ್ ಹೆಸ್ಕಾಂ ಕಚೇರಿ ಎದುರು ರೈತರ ಉಗ್ರ ಪ್ರತಿಭಟನೆ

Share

ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ, ರೈತರಿಗೆ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ರಾಜ್ಯದ ಇಂಧನ ಖಾತೆ ಸಚಿವರು ಹೇಳಿಕೆ ನೀಡುತ್ತಿದ್ದರೂ, ಕಾಗವಾಡ ತಾಲೂಕಿನ ರೈತರಿಗೆ ಕೇವಲ ಮೂರು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಉಗಾರ್ ಹೆಸ್ಕಾಂ ಕಚೇರಿ ಎದುರು ಶುಕ್ರವಾರ ಉಗ್ರ ಪ್ರತಿಭಟನೆ ನಡೆಸಿದರು.

ಉಗಾರ್ ಪಿಕೆಪಿಎಸ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಜೈನ ಸಮಾಜ ಸಂಘಟನೆಯ ಉಪಾಧ್ಯಕ್ಷ ಶೀತಲಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಉಗಾರ್ ಬಿ.ಕೆ. ಸೇರಿದಂತೆ ವಿವಿಧ ಗ್ರಾಮಗಳ ರೈತರು ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಹೆಸ್ಕಾಂ ಇಲಾಖೆಯ ಮುಖ್ಯ ಅಧಿಕಾರಿ ಮಖಾನಿ ಅವರನ್ನು ಸಂಪರ್ಕಿಸಿದ ರೈತರು, ಸರ್ಕಾರದ ಹೇಳಿಕೆಯಂತೆ ರೈತರಿಗೆ ಏಳು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಸದ್ಯ ವಿದ್ಯುತ್ ಕೊರತೆ ಇರುವುದರಿಂದ ಕೇವಲ ಮೂರು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಇದರಿಂದ ಆಕ್ರೋಶಗೊಂಡ ರೈತರು ಹೆಸ್ಕಾಂ ಇಲಾಖೆಯ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದರು.

ರೈತರಿಗೆ ವಿದ್ಯುತ್ ಪೂರೈಕೆ ಕಡಿತಗೊಳಿಸುವುದಾದರೆ, ಯಾವುದೇ ಗ್ರಾಮಗಳಿಗೆ ಹಾಗೂ ಸಕ್ಕರೆ ಕಾರ್ಖಾನೆಗಳಿಗೂ ವಿದ್ಯುತ್ ಪೂರೈಕೆ ಮಾಡಬಾರದು ಎಂದು ರೈತ ಮುಖಂಡರು ಪಟ್ಟು ಹಿಡಿದರು. ಉಗಾರ್ ವ್ಯಾಪ್ತಿಯಿಂದ ವಿದ್ಯುತ್ ಪೂರೈಕೆ ಆಗುವ ಎಲ್ಲ ಗ್ರಾಮಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.

ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವವರೆಗೆ ನಾವು ಹಿಂದೆ ಸರಿಯುವುದಿಲ್ಲ ಎಂದು ರೈತ ಮುಖಂಡ ವಜ್ರಕುಮಾರ್ ಮಗದುಮ ಹೇಳಿದರು. ಇದೇ ವೇಳೆ ಏಳು ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕೆಂದು ಹಲವು ರೈತರು ಒತ್ತಾಯಿಸಿದರು.

ಪ್ರತಿಭಟನೆ ಮುಂದುವರಿಸಲು ನಿರ್ಧಾರ

ವಿದ್ಯುತ್ ಪೂರೈಕೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಸ್ಪಷ್ಟ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಕೆಲ ರೈತರು ಹೆಸ್ಕಾಂ ಕಚೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದರು. ಇದಕ್ಕಾಗಿ ಪ್ರತಿಭಟನಾಕಾರ ರೈತರಿಗೆ ಅಡುಗೆ ಮಾಡಲು ಅಗತ್ಯವಿರುವ ಸಾಮಗ್ರಿಗಳನ್ನು ಸ್ಥಳಕ್ಕೆ ತರಿಸಿಕೊಳ್ಳಲು ಮುಂದಾದರು.

ವಿದ್ಯುತ್ ಕೊರತೆ ನಿವಾರಣೆಯಾಗುವವರೆಗೆ ಕನಿಷ್ಠ ಆರು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು. ಇಂದಿನಿಂದಲೇ ಆರು ಗಂಟೆಗಳ ವಿದ್ಯುತ್ ಅನ್ನು ಏಕಕಾಲದಲ್ಲಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಶೀತಲ ಪಾಟೀಲ್ ಅವರು ಅಧಿಕಾರಿಗಳಿಗೆ ಒತ್ತಾಯಿಸಿದರು.

ಹೆಸ್ಕಾಂ ಇಲಾಖೆಯ ಉಗಾರ್ ಭಾಗದ ರಾಹುಲ್ ಚೌಹಾನ್ ಸೇರಿದಂತೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಪ್ರತಿಭಟನಾ ಸ್ಥಳದಲ್ಲಿದ್ದರು.

ಸುಕುಮಾರ್ ಬನ್ನುರೆ
ಏನ ನ್ಯೂಸ ಕಾಗವಾಡ

Tags:

error: Content is protected !!