ರಾಜ್ಯದಲ್ಲಿ ಮಳೆಯಿಲ್ಲದೆ ಮತ್ತು ವಿದ್ಯುತ್ ಕಡಿತದಿಂದ ಕಂಗಾಲಾಗಿರುವ ರೈತರು ಇಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಒಣಗಿದ ಬೆಳೆಗಳನ್ನು ಕೈಯಲ್ಲಿಡಿದು ವಿನೂತನ ಹಾಗೂ ಉಗ್ರ ಪ್ರತಿಭಟನೆ ನಡೆಸಿದರು. ಇಡೀ ರಾಜ್ಯವನ್ನು ಬರಗಾಲ ಪೀಡಿತವೆಂದು ಘೋಷಿಸಿ, ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


ಬೆಳಗಾವಿ ನಗರದ ಪ್ರಮುಖ ರಾಣಿ ಚೆನ್ನಮ್ಮ ವೃತ್ತದಲ್ಲಿ ರಾಜ್ಯ ರೈತ ಸಂಘದ ವತಿಯಿಂದ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಮಳೆಯಿಲ್ಲದೆ ಹಾಗೂ ವಿದ್ಯುತ್ ಇಲ್ಲದೆ ಸಂಪೂರ್ಣವಾಗಿ ಒಣಗಿಹೋದ ಬೆಳೆಗಳ ಪೈರನ್ನು ಕೈಯಲ್ಲಿಡಿದು ರಸ್ತೆಗಿಳಿದ ರೈತರು, ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಸೇರಿದಂತೆ ನಾಡಿನ ಒಟ್ಟು 31 ಜಿಲ್ಲೆಗಳನ್ನು ಕೂಡಲೇ ಬರಗಾಲ ಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ರೈತ ಮುಖಂಡ ಕಿಶನ್ ನಂದಿ ಆಗ್ರಹಿಸಿದರು. ಸಂಕಷ್ಟದಲ್ಲಿರುವ ರೈತರಿಗೆ ಕೇವಲ ಭರವಸೆ ನೀಡದೆ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ಒದಗಿಸಬೇಕು ಹಾಗೂ ಕೇಂದ್ರ ಸರ್ಕಾರ ರಾಜಕೀಯ ಬದಿಗಿಟ್ಟು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಕಿಶನ್ ನಂದಿ ಒತ್ತಾಯಿಸಿದರು.

ರೈತರ ಜೀವನದೊಂದಿಗೆ ಸರ್ಕಾರಗಳು ಚೆಲ್ಲಾಟವಾಡುತ್ತಿದ್ದು, ಕಬ್ಬಿನ ಬೆಳೆ ಸೇರಿದಂತೆ ಇತರೆ ಪ್ರಮುಖ ಬೆಳೆಗಳು ನೆಲಕಚ್ಚಿವೆ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಕಿಡಿಕಾರಿದರು. ಕುಡಿಯುವ ನೀರಿಗೂ ತೊಂದರೆಯಾಗುತ್ತಿದ್ದರೂ ಜನಪ್ರತಿನಿಧಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಕೂಡಲೇ ಮುಖ್ಯಮಂತ್ರಿಗಳು ಈ ಗಂಭೀರ ಸಮಸ್ಯೆಯತ್ತ ಗಮನಹರಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದರು.
ಕೃಷಿ ಚಟುವಟಿಕೆಗಳಿಗೆ ನಿರಂತರವಾಗಿ 12 ಗಂಟೆಗಳ ಕಾಲ ವಿದ್ಯುತ್ ಪೂರೈಸಬೇಕು ಮತ್ತು ಲೋಡ್ ಶೇಡಿಂಗ್ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಒಂದು ವೇಳೆ ಸರ್ಕಾರ ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಮತ್ತು 2028ರ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದಾಗಿ ರೈತರು ಎಚ್ಚರಿಕೆಯನ್ನು ನೀಡಿದರು.

ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗಿಯಾಗಿದ್ಧರು.
